ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಚುನಾವಣೆ?

Update: 2023-03-25 06:26 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ನಂತರ ತೆರವಾಗಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವು ಸೆಪ್ಟೆಂಬರ್ ವೇಳೆಗೆ ಉಪಚುನಾವಣೆಗೆ ಸಾಕ್ಷಿಯಾಗಬಹುದು  ಎಂದು  NDTV ವರದಿ ಮಾಡಿದೆ.

ಗುಜರಾತಿನ ಸೂರತ್‌ನ ನ್ಯಾಯಾಲಯವು ಗುರುವಾರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ಅಪರಾಧಿ ಎಂದು ತೀರ್ಪು ನೀಡಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ನಂತರ ರಾಹುಲ್  ಗಾಂಧಿಯವರನ್ನು ಅನರ್ಹಗೊಳಿಸಲಾಗಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್ ನಾಯಕನಿಗೆ 30 ದಿನಗಳ ಜಾಮೀನು ನೀಡಲಾಗಿದೆ.

2015ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 151ಎ ಪ್ರಕಾರ, ಸಂಸತ್ತು ಹಾಗೂ  ರಾಜ್ಯ ಶಾಸಕಾಂಗಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಖಾಲಿಯಾದ ಆರು ತಿಂಗಳೊಳಗೆ ಉಪಚುನಾವಣೆಗಳು ನಡೆಯಬೇಕು.

ಈ ಕಾಯಿದೆಯೇ ರಾಹುಲ್  ಗಾಂಧಿ ಅವರನ್ನು ಸಂಸದ ಸ್ಥಾನದಿಂದ ತೆಗೆದುಹಾಕಲು ದಾರಿ ಮಾಡಿಕೊಟ್ಟಿತು. ಕಾಯಿದೆಯ ಸೆಕ್ಷನ್ 8(3) ಹೇಳುವಂತೆ ಸಂಸದರು ಅವಳು  ಅಥವಾ ಅವನು ತಪ್ಪಿತಸ್ಥರೆಂದು ಸಾಬೀತಾದ ಹಾಗೂ  ಕನಿಷ್ಠ ಎರಡು ವರ್ಷಗಳವರೆಗೆ ಶಿಕ್ಷೆಗೆ ಗುರಿಯಾದ ಕ್ಷಣದಲ್ಲಿ ಅನರ್ಹಗೊಳ್ಳುತ್ತಾರೆ.

ಲೋಕಸಭೆ ಸೆಕ್ರೆಟರಿಯೇಟ್ ನಿನ್ನೆ ರಾಹುಲ್  ಗಾಂಧಿಯವರ ಅನರ್ಹತೆಯ ಅಧಿ ಸೂಚನೆಯನ್ನು ನೀಡಿತು. ಈಗ ಉಪಚುನಾವಣೆ ದಿನಾಂಕಗಳನ್ನು ಘೋಷಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರವಾಗಿದೆ.

ಲೋಕಸಭೆಯಲ್ಲಿ ಈಗ ಎರಡು ಸ್ಥಾನಗಳಾದ  ಜಲಂಧರ್ ಮತ್ತು ವಯನಾಡ್ ಖಾಲಿಯಾಗಿವೆ.

ರಾಹುಲ್ ಗಾಂಧಿ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರವನ್ನು ಕಳೆದುಕೊಂಡರು ಹಾಗೂ ವಯನಾಡಿನಿಂದ ಆಯ್ಕೆಯಾದರು.

Similar News