ಗಾಂಧೀಜಿಗೆ ಯಾವುದೇ ಪದವಿ ಇರಲಿಲ್ಲ ಎಂದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ !

Update: 2023-03-25 09:32 GMT

ಭೋಪಾಲ್: ಮಹಾತ್ಮಗಾಂಧಿಯವರಿಗೆ ಯಾವುದೇ ವಿಶ್ವವಿದ್ಯಾನಿಲಯದ ಪದವಿಯೂ ಇರಲಿಲ್ಲ. ಕಾನೂನು ಪದವಿ ಬಿಡಿ, ಅವರಿಗೆ ಹೈಸ್ಕೂಲ್ ಡಿಪ್ಲೋಮಾ ಮಾತ್ರ ಇತ್ತು ಎಂದು ಹೇಳಿಕೆ ನೀಡುವ ಮೂಲಕ ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿವಾದದಲ್ಲಿ ಸಿಲುಕಿದ್ದಾರೆ.

ಇವರ ಹೇಳಿಕೆಗೆ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ಹಲವರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಗ್ವಾಲಿಯರ್‌ನಲ್ಲಿ ಗುರುವಾರ ಮಾತನಾಡಿದ ಸಿನ್ಹಾ, ಸುಶಿಕ್ಷಿತರಾಗಿ ಇರುವುದು ಮುಖ್ಯವೇ ಹೊರತು ಪದವಿ ಮುಖ್ಯವಲ್ಲ ಎಂದು ಹೇಳುವ ಪ್ರಯತ್ನದಲ್ಲಿ, "ಗಾಂಧೀಜಿಯವರನ್ನು ಅನಕ್ಷರಸ್ಥ ಎಂದು ಯಾರೂ ಹೇಳುವುದಿಲ್ಲ. ಆದರೆ ಅವರಿಗೆ ಯಾವುದೇ ವಿಶ್ವವಿದ್ಯಾನಿಲಯದ ಪದವಿ ಅಥವಾ ವಿದ್ಯಾರ್ಹತೆ ಇರಲಿಲ್ಲ ಎನ್ನುವುದು ನಿಮಗೆ ಗೊತ್ತೇ? ಗಾಂಧೀಜಿಯವರಿಗೆ ಕಾನೂನು ಪದವಿ ಇತ್ತು ಎಂದು ನಾವು ಹಲವು ಮಂದಿ ಭಾವಿಸಿದ್ದೇವೆ. ಆದರೆ ಇರಲಿಲ್ಲ. ಅವರ ಏಕೈಕ ವಿದ್ಯಾರ್ಹತೆ ಹೈಸ್ಕೂಲ್ ಡಿಪ್ಲೋಮಾ. ಅವರು ವಕೀಲಿ ವೃತ್ತಿ ಮಾಡಲು ಅರ್ಹತೆ ಹೊಂದಿದ್ದರು. ಅದರೆ ಕಾನೂನು ಪದವಿ ಇರಲಿಲ್ಲ. ಅವರಿಗೆ ಪದವಿ ಇಲ್ಲದಿದ್ದರೂ, ಎಷ್ಟು ಸುಶಿಕ್ಷಿತರು ನೋಡಿ! ಅವರು ನಮ್ಮ ರಾಷ್ಟ್ರಪಿತ ಎನಿಸಿದರು" ಎಂದು ಹೇಳಿದ್ದರು.

ಇವರ ಹೇಳಿಕೆ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತುಷಾರ್ ಗಾಂಧಿ, ಗಾಂಧೀಜಿಯವರ ಆತ್ಮಚರಿತ್ರೆಯ ಫೋಟೊ ಟ್ವೀಟ್ ಮಾಡಿ, "ಲೆಫ್ಟಿನೆಂಟ್ ಗವರ್ನರ್ ತಾವೇ ಕಲಿಯಲಿ ಎಂಬ ಉದ್ದೇಶದಿಂದ ಬಾಪು ಅವರ ಆತ್ಮಚರಿತ್ರೆಯ ಒಂದು ಪ್ರತಿಯನ್ನು ಜಮ್ಮು ರಾಜಭವನಕ್ಕೆ ನಾನು ಕಳುಹಿಸಿಕೊಟ್ಟಿದ್ದೇನೆ" ಎಂದು ಅಣಕವಾಡಿದ್ದಾರೆ.

"ಅಧ್ಯಯನ ಮಾಡಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಲಂಡನ್ ವಿವಿ ಸಂಲಗ್ನತ್ವ ಹೊಂದಿದ್ದ ಇನ್ನರ್ ಟೆಂಪಲ್ ಲಾ ಕಾಲೇಜ್‌ನಿಂದ ಪದವಿ ಪಡೆದಿದ್ದಾರೆ. ಇದೇ ವೇಳೆ ಲ್ಯಾಟಿನ್ & ಫ್ರೆಂಚ್ ಡಿಪ್ಲೋಮಾ ಕೂಡಾ ಗಳಿಸಿದರು" ಎಂದು ತುಷಾರ್ ವಿವರಿಸಿದ್ದಾರೆ.

Similar News