ಇತಿಹಾಸದಲ್ಲೇ ಅತೀ ಹೆಚ್ಚು ಭ್ರಷ್ಟ ಮತ್ತು ಅತೀ ಕಡಿಮೆ ಶಿಕ್ಷಣ ಹೊಂದಿರುವ ಪ್ರಧಾನಿ: ಮೋದಿ ವಿರುದ್ಧ ಕೇಜ್ರಿವಾಲ್‌ ಕಿಡಿ

Update: 2023-03-25 10:31 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ನಾಶಗೊಳ್ಳುತ್ತಿದೆ ಎಂದು ಆರೋಪಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗಿನಿಂದ  12ನೇ ತರಗತಿ ಪಾಸ್‌ ಆಗಿರುವ ಪ್ರಧಾನಿಯನ್ನು ಹೊಂದಿರಲಿಲ್ಲ. ಇಷ್ಟು ಕಡಿಮೆ ಶಿಕ್ಷಣ ಮತ್ತು ಇಷ್ಟೊಂದು ಭ್ರಷ್ಟ ಪ್ರಧಾನಮಂತ್ರಿಯನ್ನು ದೇಶ ಕಂಡಿಲ್ಲ ಎಂದು ಹೇಳಿದರು.

"ಅವರಿಗೆ (ಪ್ರಧಾನಿ ಮೋದಿ) ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ, ಆದರೆ ಅವರ ಅಹಂ ಗರಿಷ್ಠವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ದೇಶವನ್ನು ನಾಶಗೊಳಿಸಲಾಗುತ್ತಿದೆ ಎಂದು ಎಲ್ಲಾ ಬಿಜೆಪಿ ಮುಖಂಡರಿಗೆ ನಾನು ಹೇಳಲು ಬಯಸುತ್ತೇನೆ," ಎಂದು ಕೇಜ್ರಿವಾಲ್‌ ಹೇಳಿದರು.

ದೇಶವನ್ನು ಉಳಿಸಬೇಕಿದ್ದರೆ ಪಕ್ಷ ತೊರೆಯಿರಿ ಎಂದೂ ಅವರು ಬಿಜೆಪಿ ಮುಖಂಡರಿಗೆ ವಿನಂತಿಸಿದರು. "ದೇಶವನ್ನು ನಾಶಗೊಳಿಸಲು ಬಯಸುವವರು  ಬಿಜೆಪಿಯಲ್ಲೇ ಇರಿ, ದೇಶವನ್ನು ರಕ್ಷಿಸಲು ಬಯಸುವವರು ಇಂದೇ ಬಿಜೆಪಿ ತೊರೆಯಬೇಕು," ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಯ ಉಸ್ತುವಾರಿಯಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಹೇಳಿದ ಅವರು ಜನರು ಮುಂದೆ ಬಂದು ದೇಶವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

"ಈ ಅಪ್ರಜಾಸತ್ತಾತ್ಮಕ ಆಡಳಿತದ ವಿರುದ್ಧ ಹೋರಾಡುವುದು ಈಗ ಜನರ ಜವಾಬ್ದಾರಿ. ಈ ದೇಶವನ್ನು ರಕ್ಷಿಸಬೇಕಿದ್ದರೆ ದೇಶದ 130 ಕೋಟಿ ನಾಗರಿಕರು ಮುಂದೆ ಬರಬೇಕು. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಚಿಂತೆಯಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವದ ಮೇಲೆ ದಾಳಿ ಮತ್ತು ಅದಕ್ಕೆ ಕಳಂಕ ತರುತ್ತಿರುವ ರೀತಿ ಕಳವಳಕಾರಿ," ಎಂದು ಕೇಜ್ರಿವಾಲ್‌ ಹೇಳಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸೂರತ್‌ನ ನ್ಯಾಯಾಲಯವೊಂದು ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ ಮರುದಿನವೇ ರಾಹುಲ್‌ ಗಾಂಧಿ ಅವರನ್ನು ಸಂಸದ ಹುದ್ದೆಯಿಂದ ಅನರ್ಹಗೊಳಿಸಿದ ಕ್ರಮದ ನಂತರ ಕೇಜ್ರಿವಾಲ್‌ ಅವರ ಹೇಳಿಕೆಗಳು ಬಂದಿವೆ.

Similar News