ಜನರೊಂದಿಗೆ ಬೆರೆತು ಕೆಲಸ ಮಾಡಿದರೆ ನಾಯಕರಾಗಲು ಸಾಧ್ಯ: ಜಯಪ್ರಕಾಶ್ ಹೆಗ್ಡೆ

ಯುವ ಸಂಸತ್ ಕಾರ್ಯಾಗಾರ ಉದ್ಘಾಟನೆ

Update: 2023-03-25 11:36 GMT

ಉಡುಪಿ: ನಾಯಕತ್ವ ಎಂಬುದು ಕೇವಲ ಹುದ್ದೆ ಮಾತ್ರವಲ್ಲ. ನಾಯಕನಾದವನು ಏನು ಕೆಲಸ ಮಾಡುತ್ತಾನೆ ಎಂಬುದು ಮುಖ್ಯ. ಯಾವುದೇ ಕೆಲಸ ಮಾಡದೆ ನಾಯಕರಾಗಲು ಸಾಧ್ಯವೇ ಇಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ನೆಹರು ಯುವ ಕೇಂದ್ರ ಉಡುಪಿ ಇವರ ವತಿಯಿಂದ ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.  

ನಾಯಕ ಯಾವತ್ತಿಗೂ ಜನ ನಮ್ಮ ಹಿಂದೆ ಇದ್ದರೆ ಎಂಬುದು ಭಾವಿಸ ಬಾರದು. ಜನರ ಮನಸ್ಸಿನಲ್ಲಿ ಏನು ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಹೋಗಬೇಕು. ಕೆಲಸ ಮಾಡಿ ನಾಯಕನಾಗಬೇಕೆ ಹೊರತು ನಾಯಕನಾಗಿ ಕೆಲಸ ಮಾಡಲು ಆಗುವುದಿಲ್ಲ. ನಾಯಕನಲ್ಲಿ ಏನಾದರೂ ಸ್ಕಿಲ್ ಇರಲೇಬೇಕು ಎಂದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವಿದ್ಯಾರ್ಥಿ ಜೀವನದಲ್ಲೇ ಗಂಭೀರವಾಗಿ ಆಲೋಚನೆ ಮಾಡಬೇಕು. ವಿದ್ಯಾರ್ಥಿ ಬದುಕಿನಲ್ಲಿ ಯಶಸ್ವಿಯಾದರೆ ಆತನ ಜಿಲ್ಲೆ, ರಾಜ್ಯ, ದೇಶ ಅಭಿವೃದ್ಧಿಯಾಗುತ್ತದೆ. ನಾವು ಬೆಳೆದರೆ ಮಾತ್ರ ದೇಶ ಬೆಳೆಯಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, ಇಂದು ಡಿಜಿಟಲ್ ತಂತ್ರಜ್ಞಾನ ಸಾಕಷ್ಟು ಬೆಳೆದು ನಿಂತಿದೆ. ನಾವು ಡಿಜಿಟಲ್ ಯುಗಕ್ಕೆ ಒಗ್ಗಿಕೊಂಡಿದ್ದೇವೆ. ಅದನ್ನು ಸಕಾರಾತ್ಮಕವಾಗಿ ಬಳಕೆ ಮಾಡಿ ಕೊಳ್ಳುವುದರ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಬೇಕಾಗಿದೆ. ಡಿಜಿಟಲ್ ಶಿಕ್ಷಣದ ಬಗ್ಗೆ ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಎದುರಾಗಿದೆ. ನಾವು ವಿಶ್ವ ಮಾನವ ಪರಿಕಲ್ಪನೆಯೊಂದಿಗೆ ವಿಶ್ವ ಗುರು ಸ್ಥಾನದಲ್ಲಿ ನಿಲ್ಲುವಂತಾಗ ಬೇಕು ಎಂದರು.

ಅಧ್ಯಕ್ಷತೆಯನ್ನು ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಭಟ್ ವಹಿಸಿದ್ದರು. ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ.ಭರತ್ ವಿ., ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೇಡ್ ಡಿಸೋಜ ಉಪಸ್ಥಿತರಿದ್ದರು.

‘ಚುನಾವಣೆಯಲ್ಲಿ ಮತದಾನ ಮಾಡುವಾಗ ಯಾರು ಅಭ್ಯರ್ಥಿ ಹಾಗೂ ಅವರ ಹಿನ್ನೆಲೆಯನ್ನು ನೋಡಬೇಕು. ಈಗಾಗಲೇ ಒಂದೆರೆಡು ಬಾರಿ ಶಾಸಕರಾಗಿ ದ್ದರೆ ಅವರು ಏನು ಕೆಲಸ ಮಾಡಿದ್ದಾರೆ, ಮತದಾರರಿಗೆ ತೃಪ್ತಿ ಕೊಡುವ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಅವಲೋಕಿಸಬೇಕು. ಇಲ್ಲದಿದ್ದರೆ ಅವರನ್ನು ಬದಲಾಯಿಸುವ ಕೆಲಸವನ್ನು ಮತದಾರರು ಮಾಡಬೇಕು. ಜನರ ಕೆಲಸ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯವಾದರೆ, ಮಾಡಿಸಿಕೊಳ್ಳುವುದು ಜನರ ಹಕ್ಕು ಆಗಿದೆ. ಜನಪ್ರತಿನಿಧಿಗಳು ಜನರ ಕೆಲಸ ಮಾಡುವುದಕ್ಕೆ ಮತ ಕೇಳುವುದು ಹೊರತು ಸೇವೆ ಮಾಡಲು ಅಲ್ಲ’
-ಕೆ.ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಷರು,
ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Similar News