ರಾಹುಲ್‌ ಅನರ್ಹತೆ ವಿಚಾರಕ್ಕೂ ಅದಾನಿ ವಿವಾದಕ್ಕೂ ಸಂಬಂಧವಿದೆಯೇ?: ರವಿಶಂಕರ್‌ ಪ್ರಸಾದ್‌ ಹೇಳಿದ್ದೇನು?

Update: 2023-03-25 12:20 GMT

 ಹೊಸದಿಲ್ಲಿ: ಲೋಕಸಭೆಯಲ್ಲಿ  ತಮ್ಮ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಇರುವ ಭಯದಿಂದ ತಮ್ಮನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬೆನ್ನಿಗೇ ರಾಹುಲ್‌ ವಿರುದ್ಧ ಕೈಗೊಂಡ ಕ್ರಮಕ್ಕೂ ಅದಾನಿ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬ ಸ್ಪಷ್ಟೀಕರಣ ಬಿಜೆಪಿಯಿಂದ ಬಂದಿದೆ.

ಅದಾನಿ ಸಮೂಹದ ವಿರುದ್ಧದ ಅವ್ಯವಹಾರ ಆರೋಪಗಳ ಬಗ್ಗೆ ರಾಹುಲ್‌ ಗಾಂಧಿಯ ಪ್ರಶ್ನೆಗಳು ಅವರ ಅನರ್ಹತೆಗೆ ಕಾರಣವೆಂದು ಹೇಳುವುದು ಸುಳ್ಳು ಮತ್ತು ನಿರಾಧಾರ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ತಮ್ಮ ಅಭ್ಯಾಸಬಲದಂತೆ ನಿಜವಾದ ವಿಷಯದಿಂದ ಗಮನ ಬೇರೆಡೆಗೆ ಹರಿಸಿ ಸುಳ್ಳು ಹೇಳಿದ್ದಾರೆ ಎಂದು ಪ್ರಸಾದ್‌ ಹೇಳಿದರು.

ರಾಹುಲ್‌ ಗಾಂಧಿ ಅವರು ಉದ್ದೇಶಪೂರ್ವಕವಾಗಿ ಇತರ ಹಿಂದುಳಿದ ವರ್ಗಗಳನ್ನು ಅವಮಾನಿಸಿದ್ದಾರೆ. ಅವರಿಗೆ ಹಾಗೆ ಮಾಡಲು ಹಕ್ಕಿದ್ದರೆ, ಸಂತ್ರಸ್ತರಿಗೂ ನ್ಯಾಯಕೋರುವ ಹಕ್ಕಿದೆ. ಕ್ಷಮೆಯಾಚಿಸುತ್ತೀರಾ ಎಂದು ಕೋರ್ಟ್‌ ಅವರನ್ನು ಕೇಳಿತ್ತು ಆದರೆ ಅವರು ನಿರಾಕರಿಸಿದ್ದರು, ನಂತರ ತೀರ್ಪು ಹೊರಬಿತ್ತು," ಎಂದು ಅವರು ಹೇಳಿದರು.

ರಾಹುಲ್‌ ಗಾಂಧಿ ಅವರ ಹೇಳಿಕೆಗಳ ವಿರುದ್ಧ ತಮ್ಮ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದೂ ಅವರು ಹೇಳಿಕೊಂಡರು.

"ಕಾಂಗ್ರೆಸ್‌ ಪಕ್ಷದ ಬಳಿ ಹಲವು ಉನ್ನತ ವಕೀಲರಿರುವಾಗ ಅವರು ಏಕೆ ತಡೆಯಾಜ್ಞೆಗಾಗಿ ಸೂರತ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಹೋಗಿಲ್ಲ?ಪವನ್‌ ಖೇರಾ ಪ್ರಕರಣದಲ್ಲಿ ಅವರು ಒಂದು ಗಂಟೆಯೊಳಗೆ ಸುಪ್ರೀಂ ಕೋರ್ಟಿನಿಂದ ತಡೆಯಾಜ್ಞೆ ತಂದರು. ಆದರೆ ರಾಹುಲ್‌ ಗಾಂಧಿ ವಿಚಾರದಲ್ಲಿ ಹಾಗೇಕೆ ಮಾಡಿಲ್ಲ? ಈ ಪ್ರಶ್ನೆ ಎತ್ತಲು ಬಿಜೆಪಿ ಬಯಸುತ್ತದೆ. ಇದು ಜಾಗರೂಕತೆಯಿಂದ ಹೆಣೆದ ತಂತ್ರಗಾರಿಕೆ ಹಾಗೂ ರಾಹುಲ್‌ ತಮ್ಮ ಹುದ್ದೆ ತ್ಯಾಗ ಮಾಡಿದ್ದಾರೆಂದು ಬಿಂಬಿಸಿ ಕರ್ನಾಟಕದಲ್ಲಿ ಅದರ ಪ್ರಯೋಜನ ಪಡೆಯುವ ಉದ್ದೇಶವಿದೆ," ಎಂದು ಪ್ರಸಾದ್‌ ಹೇಳಿದರು.

ರಾಹುಲ್‌ ಅವರ ಹೇಳಿಕೆ ನಿಂದನಾತ್ಮಕವಾಗಿತ್ತು, ಟೀಕೆಯಾಗಿರಲಿಲ್ಲ, ಇದೇ ಕಾರಣಕ್ಕೆ ಮಾನಹಾನಿ ಪ್ರಕರಣ ದಾಖಲಿಸಲಾಗಿತ್ತು ಎಂದು ಅವರು ಹೇಳಿಕೊಂಡರು.

Similar News