×
Ad

ನಾಗಾಲ್ಯಾಂಡ್: ಎಂಟು ಜಿಲ್ಲೆಗಳು, 21 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಫ್ಸ್ಪಾ ಇನ್ನೂ ಆರು ತಿಂಗಳು ವಿಸ್ತರಣೆ

Update: 2023-03-25 20:51 IST

ಹೊಸದಿಲ್ಲಿ,ಮಾ.25: ನಾಗಾಲ್ಯಾಂಡ್ ನ  ಎಂಟು ಜಿಲ್ಲೆಗಳು ಹಾಗೂ ಇತರ ಐದು ಜಿಲ್ಲೆಗಳ 21 ಪೊಲೀಸ್ ಠಾಣಾ ವ್ಯಾಪ್ತಿಗಳನ್ನು ‘ಪ್ರಕ್ಷುಬ್ಧ ಪ್ರದೇಶಗಳು ’ಎಂದು ಶುಕ್ರವಾರ ಘೋಷಿಸಿರುವ ಕೇಂದ್ರ ಸರಕಾರವು, ಅಲ್ಲಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರಗಳು) ಕಾಯ್ದೆ (ಅಫ್ಸ್ಪಾ),1958ನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಿದೆ.

ಅಫ್ಸ್ಪಾ ‘ಪ್ರಕ್ಷುಬ್ಧ ಪ್ರದೇಶಗಳಲ್ಲಿ ’ಶೋಧ ಕಾರ್ಯಾಚರಣೆಗಳನ್ನು ನಡೆಸಲು, ಬಂಧಿಸಲು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವಾದರೆ ಗುಂಡು ಹಾರಿಸಲು ಸೇನಾ ಸಿಬ್ಬಂದಿಗಳಿಗೆ ವ್ಯಾಪಕ ಅಧಿಕಾರವನ್ನು ನೀಡುತ್ತದೆ.

ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ಆದೇಶವು ಎ.1ರಿಂದ ಜಾರಿಗೆ ಬರುತ್ತದೆ ಮತ್ತು ಅದನ್ನು ಮುಂಚಿತವಾಗಿ ಹಿಂದೆಗೆದುಕೊಳ್ಳದಿದ್ದರೆ ಸೆ.30ರವರೆಗೆ ಅಸ್ತಿತ್ವದಲ್ಲಿರುತ್ತದೆ.

ಈಶಾನ್ಯ ಭಾರತದಲ್ಲಿ ಅರುಣಾಚಲ ಪ್ರದೇಶ,ಮಣಿಪುರ ಮತ್ತು ನಾಗಾಲ್ಯಾಂಡ್ ನ ವಿವಿಧ ಭಾಗಗಳಲ್ಲಿ ಅಫ್ಸ್ಪಾ ಜಾರಿಯಲ್ಲಿದೆ.

ಈ ಕಾಯ್ದೆಯನ್ನು ಹಿಂದೆಗೆದುಕೊಳ್ಳುವಂತೆ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಲವಾರು ನಾಗರಿಕರು ಆಗ್ರಹಿಸುತ್ತಿದ್ದಾರೆ. 2021ರ ಡಿಸೆಂಬರ್ನಲ್ಲಿ ನಾಗಾಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳಿಂದ 14 ನಾಗರಿಕರ ಹತ್ಯೆಗಳ ಬಳಿಕ ಈ ಬೇಡಿಕೆ ಕಾವು ಪಡೆದುಕೊಂಡಿದೆ.

Similar News