ಅಮೆರಿಕ: ಸುಂಟರಗಾಳಿಯ ಅಬ್ಬರ; ಕನಿಷ್ಟ 23 ಮಂದಿ ಮೃತ್ಯು

Update: 2023-03-25 15:39 GMT

ವಾಷಿಂಗ್ಟನ್, ಮಾ.25: ಶುಕ್ರವಾರ ರಾತ್ರಿ ಅಮೆರಿಕದ ಮಿಸಿಸಿಪ್ಪಿ ಮತ್ತು ಅಲಬಾಮ ನಗರದಲ್ಲಿ  ಬೀಸಿದ ತೀವ್ರ ಸುಂಟರಗಾಳಿಯಿಂದ ಕನಿಷ್ಟ 23 ಮಂದಿ ಮೃತಪಟ್ಟಿದ್ದು ಕುಸಿದು ಬಿದ್ದಿರುವ ಮನೆಗಳ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕನಿಷ್ಟ 23 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. 4 ಮಂದಿ ನಾಪತ್ತೆಯಾಗಿದ್ದು ರಕ್ಷಣಾ ಕಾರ್ಯಾಚರಣೆಗೆ ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದೆ ಎಂದು ಮಿಸಿಸಿಪ್ಪಿ ತುರ್ತುಪರಿಸ್ಥಿತಿ ನಿರ್ವಹಣಾ ಏಜೆನ್ಸಿ ವರದಿ ಮಾಡಿದೆ.

ಸುಂಟರಗಾಳಿಯಿಂದ ಹಲವೆಡೆ ವ್ಯಾಪಕ ನಾಶ-ನಷ್ಟ ವರದಿಯಾಗಿದೆ. ಅಲಾಬಾಮ, ಮಿಸಿಸಿಪ್ಪಿ ಮತ್ತು ಟೆನ್ನೀಸಿ ನಗರಗಳಲ್ಲಿ 1 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಶನಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳಲ್ಲಿ ಮಿಸಿಸಿಪಿ ಮತ್ತು ಅಲಾಬಾಮ ನಗರದಾದ್ಯಂತ ಕನಿಷ್ಟ 11 ಸುಂಟರಗಾಳಿ ಬೀಸಿದ್ದು ರೋಲಿಂಗ್ಫೋರ್ಕ್, ಸಿಲ್ವರ್ಸಿಟಿ ಮತ್ತು ವಿನೋನಾ ನಗರಗಳಲ್ಲಿ ವ್ಯಾಪಕ ಹಾನಿಯಾಗಿದೆ. 

ಶುಕ್ರವಾರ ರಾತ್ರಿ ಗಂಟೆಗೆ 135 ಕಿ.ಮೀ ವೇಗದ ಸುಂಟರಗಾಳಿಯು ಅಮೆರಿಕದ ಗ್ರಾಮೀಣ ಭಾಗಗಳಲ್ಲಿ ಹಲವು ಮನೆಗಳ ಛಾವಣಿ ಹಾರಿಹೋಗಿದ್ದು  ವಿದ್ಯುತ್ವ್ಯವಸ್ಥೆ ಸ್ಥಗಿತಗೊಂಡಿದೆ. ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ನೆರವಾಗಲು ಹೆಚ್ಚುವರಿ ಆಂಬ್ಯುಲೆನ್ಸ್ ಮತ್ತಿತರ ತುರ್ತು ನೆರವು ವ್ಯವಸ್ಥೆಯನ್ನು ರವಾನಿಸಲಾಗಿದೆ. ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಕೆಲವರು ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

ಸುಮಾರು 30 ದಶಲಕ್ಷ ಜನತೆಗೆ ಸುಂಟರಗಾಳಿಯ ಎಚ್ಚರಿಕೆ ವ್ಯಾಪ್ತಿಯಲ್ಲಿದ್ದು ಅಗತ್ಯಬಿದ್ದರೆ ಇವರನ್ನು ಸ್ಥಳಾಂತರಿಸಲು ಸೂಚಿಸಲಾಗುವುದು. 6ಕ್ಕೂ ಹೆಚ್ಚು ಕಡೆ ತಾತ್ಕಾಲಿಕ ಆಶ್ರಯ ಶಿಬಿರಗಳ ವ್ಯವಸ್ಥೆ ಮಾಡಲಾಗಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಹೇಳಿದೆ.

Similar News