ಮುಸ್ಲಿಂ ಕೋಟಾ ರದ್ದು: ಕೋರ್ಟ್‌ ಮೊರೆ ಹೋಗಲು ಮುಂದಾದ ಜಮೀಯತ್ ಉಲಮಾ-ಎ-ಹಿಂದ್

Update: 2023-03-26 08:06 GMT

ಆಗ್ರಾ: ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಿರುವ ‘ಇತರ ಹಿಂದುಳಿದ ವರ್ಗಗಳ (ಒಬಿಸಿ) 2ಬಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕುವ ಕರ್ನಾಟಕ ಬಿಜೆಪಿ ಸರಕಾರದ ನಿರ್ಧಾರವನ್ನು ಪ್ರಮುಖ ಮುಸ್ಲಿಂ ಸಂಘಟನೆಯಾದ ಜಮೀಯತ್ ಉಲಮಾ-ಎ-ಹಿಂದ್ (Jamiat Ulema-e-Hind) ಟೀಕಿಸಿದ್ದು, ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅದು ಹೇಳಿದೆ.

ಈ ಕ್ರಮ "ಮುಸ್ಲಿಮರಿಗೆ ಮಾಡಿದ ಘೋರ ಅನ್ಯಾಯ" ಎಂದು ಸಂಘಟನೆಯ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಬಣ್ಣಿಸಿದ್ದಾರೆ.

“ಒಂದು ಕಡೆ ಪ್ರಧಾನಮಂತ್ರಿಯವರು ಮುಸ್ಲಿಮರ ಹಿಂದುಳಿದ ವರ್ಗದ ಅಭಿವೃದ್ಧಿ ನೀತಿಯನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ  ಇನ್ನೊಂದೆಡೆ ಕರ್ನಾಟಕದಲ್ಲಿ ಅವರ ಪಕ್ಷದ ಸರಕಾರವು ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡು ಇತರ ವರ್ಗಗಳಿಗೆ ಹಂಚುತ್ತಿದೆ’’ ಎಂದು ಮದನಿ ಹೇಳಿದ್ದಾರೆ.

4 ಶೇ. OBC ಮುಸ್ಲಿಂ ಕೋಟಾವನ್ನು ಒಕ್ಕಲಿಗರು ಮತ್ತು ಲಿಂಗಾಯತರ ನಡುವೆ ವಿಂಗಡಿಸಲಾಗಿದೆ. ಕೋಟಾಕ್ಕೆ ಅರ್ಹರಾಗಿರುವ ಮುಸ್ಲಿಮರನ್ನು ಈಗ ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಅಡಿಯಲ್ಲಿ ವರ್ಗೀಕರಿಸಲಾಗಿದೆ.

ವಿವಿಧ ಅಧಿಕೃತ ಅಂಕಿಅಂಶಗಳು ಹಾಗೂ  ವರದಿಗಳು ಭಾರತದ ಮುಸ್ಲಿಮರು ಆರ್ಥಿಕವಾಗಿ ಹಾಗೂ  ಶೈಕ್ಷಣಿಕವಾಗಿ ಅಭಿವೃದ್ಧಿಯ ಅತ್ಯಂತ ಕೆಳ ಹಂತದಲ್ಲಿದ್ದಾರೆ ಎಂಬ ಅಂಶವನ್ನು ದೃಢಪಡಿಸುತ್ತದೆ.  ಆದ್ದರಿಂದ, ಯಾವುದೇ ಸಮುದಾಯವು ಮುಸ್ಲಿಮರಿಗಿಂತ ಹೆಚ್ಚಿನ ಮೀಸಲಾತಿಗೆ ಅರ್ಹವಲ್ಲ ಎಂದು ಮದನಿ ಹೇಳಿದರು.

ಕರ್ನಾಟಕ ಸರಕಾರದ ಈ ಹೆಜ್ಜೆಯು "ಚುನಾವಣಾ ಅವಕಾಶವಾದ ಹಾಗೂ  ತುಷ್ಟೀಕರಣದ ಕೆಟ್ಟ ಉದಾಹರಣೆ" ಎಂದು ಕರೆದ ಮದನಿ, "ಈ ಕ್ರಮವು ಎರಡು ಸಮುದಾಯಗಳ ನಡುವೆ ವೈಷಮ್ಯವನ್ನು ಸೃಷ್ಟಿಸುವ ಗುರಿಯನ್ನು ಮಾತ್ರ ಹೊಂದಿದೆ. ನಾವು ಇದರ ವಿರುದ್ಧ ನ್ಯಾಯಾಲಯವನ್ನು ಸಂಪರ್ಕಿಸುತ್ತೇವೆ" ಎಂದು ಹೇಳಿದರು.

Similar News