​ಇಂಟೆಕ್ ವತಿಯಿಂದ ಕಾರ್ಮಿಕರ ಸಮಾವೇಶ

Update: 2023-03-26 12:37 GMT

ಮಂಗಳೂರು, ಮಾ.26: ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ  ಇಂಟೆಕ್ ಸಂಘಟನೆ ಭಾರತದಲ್ಲಿ ಬಲಿಷ್ಠವಾಗಿ ಕಟ್ಟಿದ್ದೇವೆ. ಸಂಘಟನೆ ಇನ್ನೂ ಬಲಿಷ್ಠವಾಗಲು ಕಾರ್ಮಿಕರು ಬೆನ್ನೇಲುಬಾಗಿ ನಿಲ್ಲಬೇಕು ಎಂದು ಇಂಟೆಕ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ತಿಳಿಸಿದ್ದಾರೆ.

ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಮಿಕ ಸಮಾವೇಶದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರಿನಲ್ಲಿ ಕಾರ್ಮಿಕ ಸಂಘಟನೆ ಉತ್ತಮವಾಗಿ ಬೆಳೆಯಲು ಇಂಟೆಕ್ ನ ಕೊಡುಗೆ ಇದೆ. ನವಮಂಗಳೂರು, ಕುದುರೆಮುಖ ಹಾಗೂ ಇನ್ನಿತರ ಕೆಲವೊಂದ ಕಾರ್ಖಾನೆಯಾಗಳಲ್ಲಿ ಇಂಟೆಕ್ ಪ್ರಮುಖ ಸಂಘಟನೆಯಾಗಿದೆ. ಸುಮಾರು ವರ್ಷದಿಂದ ಕುದುರೆಮುಖದಲ್ಲಿ ಬಿಎಂಎಸ್‌ನವರು ಪ್ರಬಲ್ಯ ಹೊಂದಿದ್ದರು. ಈಗ ಇಂಟೆಕ್ ಸಂಘಟನೆ ಕೇವಲ 25 ಮತದಿಂದ ಗೆಲುವು ಸಾಧಿಸಿ ಪ್ರಥಮವಾಗಿ ಪ್ರಬಲ್ಯವನ್ನು ಹೊಂದಿದೆ. ಕಾರ್ಮಿಕ ನಾಯಕರುಗಳು ಕುದುರೆಮುಖದ ಕಾರ್ಖನೆಗಳ ಕಾರ್ಮಿಕ ಸಮಸ್ಯೆಯನ್ನು ಶೇಕಡಾ 95ರಷ್ಟು ಪರಿಹರಿಸಿ, 170 ಮತದಿಂದ ಮೇಲುಗೈ ಸಾಧಿಸಿದೆ. ಪಣಂಬೂರಿನಲ್ಲಿರುವ ಇಂಡಸ್ಟ್ರೀಸ್‌ಗಳ ಕಾರ್ಮಿಕರಿಗೆ ಇಂಟೆಕ್ ಪ್ರಥಮವಾದ ಸಂಘಟನೆಯಾಗಿದೆ. ಕಾರ್ಮಿಕ ಸಮಸ್ಯೆಗಳ ಬಗ್ಗೆ ಅರಿವು ಇಲ್ಲದ ಪ್ರಮುಖರು ಇಂಟೆಕ್ ಯಾವುದೇ ಕೆಲಸವನ್ನು ನಿರ್ವಹಿಸುತ್ತಿಲ್ಲ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಇಂಟೆಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮತ್ತೊಮ್ಮೆ ಮಂಗಳೂರಿನಲ್ಲಿ ಎಲ್ಲಾ ಟೀಕೆಗಳನ್ನು ಮೀರಿ ಗೆದ್ದು ಬಂದಿದ್ದಾರೆ. ಅವರ ಈ ಗೆಲುವಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪ್ರೋತ್ಸಾಹವನ್ನು ನೀಡಿದ್ದಾರೆ ಎಂದರು.

ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯಲ್ಲಿ ಸುಮಾರು 10 ಸಾವಿರ ಕೋಟಿ ರೂ.ನಿಧಿ ಇದೆ. ಆದರೆ ಅಧಿಕಾರಿಗಳು ಸರಿಯಾಗಿ ಉಪಯೋಗಿಸುತ್ತಿಲ್ಲ. ಕೊರೋನಾ ಸಂದರ್ಭದಲ್ಲಿ 800ಕೋಟಿ ರೂ. ಹಣವನ್ನು ಕರ್ನಾಟಕ ರಾಜ್ಯ ಸರಕಾರ ಹಿಂಪಡೆದಿದೆ. ಸರಕಾರವೂ ಈ ಹಣದಿಂದ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಕಿಟ್ ನೀಡಿ ಮೋಸ ಮಾಡಿದೆ.  ಸದಸ್ಯರಾದಲ್ಲಿ ಮಕ್ಕಳ ಮದುವೆಗೆ 50 ಸಾವಿರ ರೂ ಉಚಿತವಾಗಿ ನೀಡಲಾಗುತ್ತಿದೆ. ಕೆಲಸದ ಸಮಯದಲ್ಲಿ ನಿಧಾನರಾದರೆ 5ಲಕ್ಷ ಪರಿಹಾರ ನಿಧಿ, ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದರೆ ರೂ. 3 ಲಕ್ಷದ ವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ ಮತ್ತು ಮಕ್ಕಳಿಗೆ ವಿದ್ಯಾರ್ಥಿ ವೇತನ ಕೂಡಾ ನೀಡಲಾಗುತ್ತದೆ. ಅಂತೆಯೇ ರಾಜ್ಯ ಸಭಾ ಚುನಾವಣೆಯಲ್ಲಿ 2 ಬಾರಿ ಗೆದ್ದುಕೊಂಡ ಅಲ್ಕಾ ರಾಷ್ಟ್ರೀಯ ಇಂಟೆಕ್‌ನ ಮಹಿಳಾ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಯುವ ಅಧ್ಯಕ್ಷರಾಗಿ ಸಂಜಯ್ ಗಾಭಾ ಅವರು ಆಯ್ಕೆಯಾಗಿದ್ದಾರೆ. ಸಂಜೀವ ರೆಡ್ಡಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಜೆ.ಆರ್ ಲೋಬೊ ಮಾತನಾಡಿ, ಸರಕಾರದ ಬೆಲೆ ಏರಿಕೆಯನ್ನು ಪೈಪೋಟಿ ಮಾಡಿ ಇಳಿಸಲು  ಕಾರ್ಮಿಕರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಶಕ್ತಿ ಭರಿಸುವ ಕೆಲಸ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಮಾಡಿದ ಧೋರಣೆ ಯನ್ನು ಖಂಡಿಸಿ ಮೆಟ್ಟಿನಿಲ್ಲಲು ಸಹಕಾರಿಯಾಗುತ್ತದೆ. 2014ರಲ್ಲಿ ಮನಮೋಹನ್‌ ಸಿಂಗ್ ಪ್ರಧಾನ ಮಂತ್ರಿಯಾಗಿದ್ದರು ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಮಯ ಯುವಕರಿಗೆ ಉದ್ಯೋಗದ ಕೊರತೆ ಇರಲಿಲ್ಲ. ಐಟಿ ಸಂಸ್ಥೆಗಳು ಹಾಗೂ ಉತ್ಪಾದನಾ ಕಾರ್ಯ ಚೆನ್ನಾಗಿ ನಡೆಯುತ್ತಿತ್ತು. ಪಾಶ್ಚತ್ಯ ದೇಶದಲ್ಲಿ ಬ್ಯಾಂಕುಗಳು ದಿವಾಳಿಗಳಾಗಿದ್ದವು. ಆದರೆ ಮನೋಮೋಹನ್ ಸಿಂಗ್‌ರವರ ನೇತೃತ್ವದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅರ್ಥಿಕ ನೀತಿಗಳಿಂದ ನಮ್ಮ ದೇಶದ ಬ್ಯಾಂಕುಗಳು ಸ್ಥಿರವಾಗಿ ದ್ದವು. ಬಿಜೆಪಿ ಸರಕಾರದಿಂದ ದೇಶದಲ್ಲಿ ಅರ್ಥಿಕ ಸ್ಥಿತಿ ಕುಂಠಿತವಾಗುತ್ತಿದ್ದು, ನಿರುದ್ಯೋಗ ತಾಂಡವವಾಡುತ್ತಿದೆ. ದೇಶದಲ್ಲಿ ಅನೇಕರು ವಿದ್ಯಾಭ್ಯಾಸವನ್ನು ಕಲಿತು ಹೊರಬರುತ್ತಿದ್ದು, ಅವರಿಗೆ ಸರಿಯಾದ ಉದ್ಯೋಗ ಕೈಗೆಟಕು ತ್ತಿಲ್ಲ. ಕರ್ನಾಟಕ ರಾಜ್ಯ ಸರಕಾರದಲ್ಲಿ ಅನೇಕ ವರ್ಷ ಕಾರ್ಯನಿರ್ವಹಿಸಿ ದುಡಿಯುತ್ತಿದ್ದರೂ, ಇನ್ನೂ ಅವರನ್ನು ಗುತ್ತಿಗೆ ಆಧಾರದಲ್ಲಿ ಮುಂದುವರಿಸುತ್ತಿದ್ದಾರೆ, ಖಾಯಂ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಇಂಟೆಕ್ ಸಂಸ್ಥೆ ಕಾರ್ಮಿಕರ ಹಕ್ಕನ್ನು ರಕ್ಷಣೆ ಮಾಡುವ ಸಂಸ್ಥೆ ಮುಂದಿನ ದಿನಗಳಲ್ಲಿ ಸಂಘಟನೆಯೂ ಹೆಚ್ಚು ಕಾರ್ಯಪ್ರವೃತ್ತವಾಗ ಬೇಕು ಎಂದರು.

ಇಂಟೆಕ್‌ನ ಜಿಲ್ಲಾ ಅಧ್ಯಕ್ಷ ಮನೋಜ್ ಶೆಟ್ಟಿ ಮಾತನಾಡಿ, ಕಾರ್ಮಿಕ ಕಷ್ಟವನ್ನು ಅರಿತುಕೊಳ್ಳುವ ರಾಜಕೀಯ ಪಕ್ಷ ಸಮಾಜಕ್ಕೆ ಆಗತ್ಯವಿದೆ. ಕಾರ್ಮಿಕ ಮತದಿಂದ ದೇಶ ಮುಂದುವರಿಯಲು ಸಾಧ್ಯ. ಇಂಟೆಕ್ ಗಟ್ಟಿ ಪಡಿಸುವ ಮೂಲಕ ಕಾರ್ಮಿಕರ ತೊಂದರೆಯನ್ನು ಪರಿಹರಿಸಬಹುದು. ಮೋದಿಯ ವರ್ಚಸ್ಸಿನಿಂದ ಪ್ರಜಾಪ್ರಭುತ್ವದ ಮೌಲ್ಯ ಕುಸಿದಿದೆ. ಕಾಂಗ್ರೆಸ್ ಪಕ್ಷದ ಒಳ್ಳೆಯ ಕಾರ್ಯಕ್ರಮಗಳಾದ ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಹಾಗೂ ಇನ್ನಿತರ ಯೋಜನೆಗಳನ್ನು ಗಮನದಲ್ಲಿಟ್ಟು, ಕಾರ್ಮಿಕರು ಕಾಂಗ್ರೆಸ್ಸಿಗೆ ಮತವನ್ನು ನೀಡಬೇಕು ಹಾಗೂ ಕಾಂಗ್ರೆಸ್ 3 ಗ್ಯಾರಂಟಿಗಳ ಪೈಕಿ ನಿರುದ್ಯೋಗ ಭತ್ಯೆ 3000ರೂ. ಮಾಸಶಾನ ನೀಡಲಾಗುವುದು ಎಂದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮನೋಜ್ ಶೆಟ್ಟಿ, ರಾಘವೇಂದ್ರ, ಪುರುಷೋತ್ತಮ, ತಾರನಾಥ್ ಗಟ್ಟಿ, ದಿವಾಕರ್, ಮನೋಹರ್, ವಿಶ್ವಸ್ ದಾಸ್, ಅಪ್ಪಿ, ಹುಸೇನ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಕಾರ್ಮಿಕ ವರ್ಗದವರು, ಕಾರ್ಮಿಕ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Similar News