ಮಾರ್ಚ್ 25ನ್ನು ವಿಶ್ವ ನರಮೇಧ ದಿನವೆಂದು ಘೋಷಿಸಿ: ವಿಶ್ವಸಂಸ್ಥೆಗೆ ಬಾಂಗ್ಲಾ ಆಗ್ರಹ

Update: 2023-03-26 16:51 GMT

ಢಾಕಾ, ಮಾ.26: ಮಾರ್ಚ್ 25ನ್ನು ವಿಶ್ವ ನರಮೇಧ ದಿನವೆಂದು ಘೋಷಿಸುವಂತೆ ಬಾಂಗ್ಲಾದೇಶ ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ.

1971ರ ಮಾರ್ಚ್ 25ರ ಮಧ್ಯರಾತ್ರಿ ಪಾಕಿಸ್ತಾನದ ಸೇನೆ ಬಾಂಗ್ಲಾದ ನಿರಾಯುಧ ಜನರ ಮೇಲೆ ದಾಳಿ ನಡೆಸಿ 1000 ಜನರನ್ನು ಕೊಂದು ಹಾಕಿತ್ತು. ನಂತರದ 9 ತಿಂಗಳಲ್ಲಿ 9 ದಶಲಕ್ಷ ಜನರನ್ನು ಹತ್ಯೆ ಮಾಡಿದೆ. ಇದು ಅತ್ಯಂತ ಕ್ರೂರ ನರಮೇಧಗಳಲ್ಲಿ ಒಂದಾಗಿದೆ. 2017ರಿಂದ ಮಾರ್ಚ್ 25ನ್ನು ಬಾಂಗ್ಲಾದೇಶದ ನರಮೇಧ ದಿನವಾಗಿ ನಾವು ಪರಿಗಣಿಸಿದ್ದೇವೆ. ಇದೀಗ ವಿಶ್ವಸಂಸ್ಥೆಯಿಂದ ಎರಡು ವಿಷಯಗಳನ್ನು ನಾವು ಬಯಸುತ್ತಿದ್ದೇವೆ.

1971ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿರುವುದು ನರಮೇಧವಾಗಿದೆ ಎಂದು ಪರಿಗಣಿಸಬೇಕು ಹಾಗೂ ಈ ದಿನವನ್ನು ವಿಶ್ವ ನರಮೇಧ ದಿನವೆಂದು ಘೋಷಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ಅಂದಾಲಿಬ್ ಇಲಿಯಾಸ್ ಒತ್ತಾಯಿಸಿದ್ದಾರೆ.

ಈ ಮಧ್ಯೆ, ಇಂಟರ್ನ್ಯಾಷನಲ್ ಫೋರಂ ಫಾರ್ ಸೆಕ್ಯುಲರ್ ಬಾಂಗ್ಲಾದೇಶ(ಐಎಫ್ಎಸ್ಬಿ)ದ ಸ್ವಿಝರ್ಲ್ಯಾಂಡ್ ಘಟಕವು ಜಿನೆವಾದಲ್ಲಿನ ಬ್ರೋಕನ್ಚೇರ್ ವೃತ್ತದ ಬಳಿಯಿರುವ ವಿಶ್ವಸಂಸ್ಥೆ ಕಟ್ಟಡದ ಎದುರು ಪ್ರದರ್ಶನ ನಡೆಸಿ, 1971ರಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಬಾಂಗ್ಲಾದೇಶದ ನರಮೇಧವನ್ನು ಗುರುತಿಸುವಂತೆ ಆಗ್ರಹಿಸಿದೆ. ಯುರೋಪ್ನ ಬಾಂಗ್ಲಾದೇಶ ಸಮುದಾಯದವರು ವಿಶ್ವಸಂಸ್ಥೆ ಕಚೇರಿಯೆದುರು ಗುಂಪುಸೇರಿ 1971ರಲ್ಲಿ ಪಾಕಿಸ್ತಾನ ನಡೆಸಿದ ನರಮೇಧಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. 

`ಆಲ್ ಯುರೋಪಿಯನ್ ಫ್ರೀಡಂ ಫೈಟರ್ ಸಂಗ್ಸದ್ ಆಫ್ ಬಾಂಗ್ಲಾದೇಶ'ದ ಮುಖಂಡರು, ಸ್ವಿಝರ್ಲ್ಯಾಂಡಿನಲ್ಲಿರುವ ಅವಾಮಿ ಲೀಗ್ ಸದಸ್ಯರು ಹಾಗೂ ಇತರ ಅಂತರಾಷ್ಟ್ರೀಯ ಎನ್ಜಿಒಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ) ಮತ್ತು ಜಮಾತೆ ಇಸ್ಲಾಮಿ ಬಾಂಗ್ಲಾದೇಶ್ ಪಕ್ಷಗಳು ಪಾಕಿಸ್ತಾನ ಸೇನೆ ನಡೆಸಿದ ದೌರ್ಜನ್ಯದಲ್ಲಿ ಸಹಭಾಗಿಗಳಾಗಿದ್ದವು ಎಂದು ಅವಾಮಿ ಲೀಗ್ ಮುಖಂಡರು ಘೋಷಣೆ ಕೂಗಿದರು ಎಂದು ವರದಿಯಾಗಿದೆ.  

ಬಂಗಾಳಿ ರಾಷ್ಟ್ರೀಯತಾವಾದಿ ಚಳವಳಿಯನ್ನು ಹತ್ತಿಕ್ಕಲು 1971ರ ಮಾರ್ಚ್ 25ರಂದು ಪಾಕಿಸ್ತಾನ ಸೇನೆ ಢಾಕಾದಲ್ಲಿ `ಆಪರೇಷನ್ ಸರ್ಚ್ಲೈಟ್' ಎಂಬ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. 1971ರ ಡಿಸೆಂಬರ್ 16ರಂದು ಪಾಕಿಸ್ತಾನ ಸೇನೆಯು ಭಾರತ-ಬಾಂಗ್ಲಾದೇಶದ ಜಂಟಿ ಸೇನಾಪಡೆಗೆ ಶರಣಾಗಿತ್ತು ಮತ್ತು ಶೇಖ್ ಮುಜಿಬುರ್ ರೆಹ್ಮಾನ್ ನಾಯಕತ್ವದಡಿ ಬಾಂಗ್ಲಾದೇಶವು ಹೊಸ ದೇಶವಾಗಿ ಉದಯಿಸಿತ್ತು.

Similar News