ಕೇರಳವನ್ನು ಬೆಚ್ಚಿಬೀಳಿಸಿರುವ ಕಸ್ಟಡಿ ಸಾವು

Update: 2023-03-26 17:08 GMT

ಕೊಚ್ಚಿ,ಮಾ.26: ಇಲ್ಲಿಯ ತ್ರಿಪುನ್ನಿತ್ತುರಾ ಹಿಲ್ ಪ್ಯಾಲೇಸ್ ರೋಡ್ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಸಂಭವಿಸಿರುವ ಕಸ್ಟಡಿ ಸಾವು ಇಡೀ ಕೇರಳವನ್ನು ಬೆಚ್ಚಿಬೀಳಿಸಿದೆ. ವಾಹನ ತಪಾಸಣೆ ಸಂದರ್ಭ ಪೊಲೀಸನೋರ್ವ ಹೆಲ್ಮೆಟ್ ನಿಂದ ಹೊಡೆದ ಬಳಿಕ ಇಬ್ಬರು ಮಕ್ಕಳ ತಂದೆ ಮನೋಹರನ್ (53) ಎನ್ನುವವರು ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದಾರೆ.

ಇರುಪನಂ ನಿವಾಸಿ ಹಾಗೂ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಮನೋಹರನ್ ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದ ಒಂದು ಗಂಟೆಯೊಳಗೆ ಎರ್ನಾಕುಲಂ ಮೆಡಿಕಲ್ ಟ್ರಸ್ಟ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿತ್ತು.

ವಾಹನ ಬಿಡಿಭಾಗಗಳ ಪುಟ್ಟ ಅಂಗಡಿಯೊಂದನ್ನು ಹೊಂದಿದ್ದ ಮನೋಹರನ್ ಮದ್ಯಪಾನ ಮಾಡಿ ಬೈಕ್ ಚಲಾಯಿಸಿರಲಿಲ್ಲ,ಆದರೂ ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ಯಲಾಗಿತ್ತು ಎಂದು ಘಟನೆಯ ಪ್ರತ್ಯಕ್ಷದರ್ಶಿ ತಿಳಿಸಿದರು.

ವ್ಯಾಪಕ ಆಕ್ರೋಶದ ಬಳಿಕ ತಪಾಸಣೆ ಸಂದರ್ಭ ಮನೋಹರನ್ ಕೆನ್ನೆಗೆ ಹೊಡೆದಿದ್ದ ಸಬ್-ಇನ್ಸ್ಪೆಕ್ಟರ್ ಜಿಮ್ಮಿ ಜೋಸ್ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪೊಲೀಸರು ಸೂಚನೆ ನೀಡಿದಾಗ ಮನೋಹರನ್ ತಕ್ಷಣ ಬೈಕ್ ನಿಲ್ಲಿಸಿರಲಿಲ್ಲ. ಸ್ವಲ್ಪ ಮುಂದೆ ಸಾಗಿ ಪೊಲೀಸ್ ವಾಹನದತ್ತ ಮರಳಿದಾಗ ಬೈಕ್ ಏಕೆ ನಿಲ್ಲಿಸಲಿಲ್ಲ ಎಂದು ಪೊಲೀಸರು ಪ್ರಶ್ನಿಸಿದ್ದರು. ಮನೋಹರನ್ ತನ್ನ ಹೆಲ್ಮೆಟ್ ತೆಗೆಯುತ್ತಿದ್ದಾಗ ಪೊಲೀಸ್ ಅಧಿಕಾರಿ ಅವರ ಕಪಾಳಕ್ಕೆ ಬಾರಿಸಿದ್ದರು. ತಾನು ಹೆದರಿದ್ದರಿಂದ ತಕ್ಷಣವೇ ಬೈಕ್ ನಿಲ್ಲಿಸಿರಲಿಲ್ಲ ಎಂದು ಮನೋಹರನ್ ತಿಳಿಸಿದ್ದರು. ಅಲ್ಕೋಮೀಟರ್ ಬಳಸಿ ತಪಾಸಣೆ ನಡೆಸಿದಾಗ ಮನೋಹರನ್ ಮದ್ಯಪಾನ ಮಾಡಿರಲಿಲ್ಲ ಎನ್ನುವುದು ದೃಢಪಟ್ಟಿತ್ತು. ಆದರೂ ಪೊಲೀಸರು ಅವರನ್ನು ಠಾಣೆಗೆ ಎಳೆದೊಯ್ದಿದ್ದರು ಎಂದು ನೆರೆಮನೆಯ ನಿವಾಸಿ ರಮಾ ತಿಳಿಸಿದರು. ಪೊಲೀಸರು ಮನೋಹರನ್ ಮನೆಯಿರುವ ಕಿರಿದಾದ ಓಣಿಯ ಪ್ರವೇಶದ್ವಾರದಲ್ಲಿ ತಪಾಸಣೆ ನಡೆಸುತ್ತಿದ್ದರು.

ಓರ್ವ ಪೊಲೀಸ್ ಹೆಲ್ಮೆಟ್ ನಿಂದ ಮನೋಹರನ್ ಗೆ ಥಳಿಸಿದ್ದ ಎಂದು ಇನ್ನೋರ್ವ ಪ್ರತ್ಯಕ್ಷದರ್ಶಿ ತಿಳಿಸಿದರು.

ಠಾಣೆಯನ್ನು ತಲುಪಿದ ಬೆನ್ನಲ್ಲೇ ರಾತ್ರಿ 9:30ರ ಸುಮಾರಿಗೆ ಮನೋಹರನ್ ಕುಸಿದು ಬಿದ್ದಿದ್ದರು. ಅವರನ್ನು ಮೊದಲು ತ್ರಿಪುನ್ನಿತ್ತುರಾ ತಾಲೂಕು ಆಸ್ಪತ್ರೆಗೆ ಮತ್ತು ನಂತರ ಎರ್ನಾಕುಲಂ ಮೆಡಿಕಲ್ ಟ್ರಸ್ಟ್ ಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು.

ಪೊಲೀಸ್ ಅಧಿಕಾರಿಯ ಕ್ರಮ ಸರಿಯಲ್ಲ ಎಂದು ಒಪ್ಪಿಕೊಂಡ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕೆ.ಸೇತುರಾಮನ್ ಅವರು,ನಾಗರಿಕರಿಗೆ ಕಪಾಳಮೋಕ್ಷ ಮಾಡಲು ಯಾರಿಗೂ ಅನುಮತಿಯಿಲ್ಲ. ಮನೋಹರನ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರಲಿಲ್ಲ. ತನಿಖೆಯ ಜವಾಬ್ದಾರಿಯನ್ನು ಡಿವೈಎಸ್ಪಿಗೆ ವಹಿಸಲಾಗಿದೆ ಎಂದು ತಿಳಿಸಿದರು. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕವೇ ಮನೋಹರನ್ ಸಾವಿಗೆ ನಿಖರವಾದ ಕಾರಣ ಗೊತ್ತಾಗಬೇಕಿದೆ. ಅವರು ಹೃದಯ ಸ್ತಂಭನದಿಂದ ಮೃತಪಟ್ಟಿರಬಹುದೆಂದು ಪ್ರಾಥಮಿಕ ವರದಿಯು ಶಂಕಿಸಿದೆ. ಅವರು ಅಧಿಕ ರಕ್ತದೊತ್ತಡಕ್ಕಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ ಎಂದೂ ಅವರು ತಿಳಿಸಿದರು.

ಈ ನಡುವೆ ಮನೋಹರನ್ ಕಸ್ಟಡಿ ವಿವಾದ ದೊಡ್ಡ ರಾಜಕೀಯ ವಿವಾದವನ್ನು ದೃಷ್ಟಿಸಿದೆ. ಕಿರಿದಾದ ರಸ್ತೆಗಳಲ್ಲಿ ತಪಾಸಣೆ ನಡೆಸುವುದು ಕೇರಳ ಡಿಜಿಪಿಯ ಸುತ್ತೋಲೆಗೆ ವಿರುದ್ಧವಾಗಿದೆ. ಹಿಲ್ ಸ್ಟೇಷನ್ ಠಾಣಾಧಿಕಾರಿಯ ದೌರ್ಜನ್ಯಗಳ ಬಗ್ಗೆ ಹಲವಾರು ದೂರುಗಳು ತನಗೆ ಬಂದಿವೆ ಎಂದು ಸ್ಥಳೀಯ ಶಾಸಕ ಅನೂಪ್ ಜಾಕೋಬ್ ಹೇಳಿದರು.

ವಿಪಕ್ಷ ನಾಯಕ ವಿ.ಡಿ.ಸತೀಶನ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಮನೋಹರನ್ ನಿವಾಸಕ್ಕೆ ಭೇಟಿ ನೀಡಿದ್ದರು. ಪೊಲೀಸ್ ದೌರ್ಜನ್ಯಗಳು ಹೆಚ್ಚುತ್ತಿದ್ದರೆ ಮುಖ್ಯಮಂತ್ರಿಗಳು ಗೃಹಮಂತ್ರಿಗಳ ಖಾತೆಯನ್ನಿಟ್ಟುಕೊಂಡು ನಾಚಿಕೆಯಿಲ್ಲದೆ ಕುಳಿತಿದ್ದಾರೆ ಎಂದು ಸತೀಶನ್ ಟೀಕಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ರವಿವಾರ ಪೊಲೀಸ್ ಠಾಣೆಗೆ ಪ್ರತಿಭಟನಾ ಜಾಥಾಗಳನ್ನು ನಡೆಸಿದವು.

Similar News