ನ್ಯಾಯಾಂಗ ವ್ಯವಸ್ಥೆ ಮಾರ್ಪಾಡಿಗೆ ಮುಂದಾದ ಇಸ್ರೇಲ್‌ ಪ್ರಧಾನಿ: ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆ

ವಿಮಾನಗಳ ಹಾರಾಟ ಸ್ಥಗಿತ

Update: 2023-03-27 11:23 GMT

ಟೆಲ್-ಅವೀವ್‌: ಇಸ್ರೇಲ್‌ನ (Israel) ನ್ಯಾಯಾಂಗ ವ್ಯವಸ್ಥೆಯನ್ನು ಮಾರ್ಪಡಿಸುವ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಅವರ ಯೋಜನೆಯನ್ನು ಸ್ಥಗಿತಗೊಳಿಸುವಂತೆ  ಆಗ್ರಹಿಸಿದ ರಕ್ಷಣಾ ಸಚಿವ ಯೋವ್‌ ಗಾಲಂಟ್‌ ಅವರನ್ನು ಹುದ್ದೆಯಿಂದ ಕೈಬಿಟ್ಟ ಬೆನ್ನಲ್ಲೇ ಇಸ್ರೇಲ್‌ನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರು ಇಸ್ರೇಲಿ ಧ್ವಜಗಳನ್ನು ಕೈಗಳಲ್ಲಿ ಹಿಡಿದುಕೊಂಡು ಪ್ರಧಾನಿಯ ಯೋಜನೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಜೆರುಸಲೆಂ ನಗರದಲ್ಲಿ ಪೊಲೀಸರು ಮತ್ತು ಸೈನಿಕರು ಪ್ರಧಾನಿಯ ನಿವಾಸದ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದರು.

ಇಸ್ರೇಲ್‌ ಸರ್ಕಾರ ಮತ್ತು ಅಲ್ಲಿನ ನ್ಯಾಯಾಧೀಶರ ನಡುವಿನ ಜಟಾಪಟಿಯ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವವನ್ನು ಅದುಮಲು ಪ್ರಧಾನಿ ನೆತನ್ಯಾಹು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನೆತನ್ಯಾಹು ತಾನು ಜೈಲಿಗೆ ಹೋಗುವುದನ್ನು ತಪ್ಪಿಸಲು ನ್ಯಾಯಾಧೀಶರ ಮೇಲೆ ಒತ್ತಡ ಹೇರಲು ಕೊನೆಯ ಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಪ್ರತಿಭಟನೆಗಳು ವ್ಯಾಪಕವಾಗುತ್ತಿರುವ ನಡುವೆ ಅಲ್ಲಿನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ. ವಿಮಾನ ನಿಲ್ದಾಣ ಉದ್ಯೋಗಿಗಳ ಯೂನಿಯನ್‌ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದೆ.

ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆ ಸೋಮವಾರ ಪ್ರತಿಭಟನೆಗೆ ಕರೆ ನೀಡಿತ್ತು.

ಸೋಮವಾರ ಇಸ್ರೇಲ್‌ ಅಧ್ಯಕ್ಷ ಐಸಾಕ್‌ ಹೆರ್ಝೊಗ್‌ ಅವರು ಸರಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾರ್ಪಾಟು ತರುವ ಯೋಜನೆ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ಟಾಲಿ ಬೆನ್ನೆಟ್‌ ಕೂಡ ಇದೇ ಆಗ್ರಹ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಇಪಿಎಫ್ಒ ಚಂದಾದಾರರು ಅದಾನಿಯ ಎರಡು ಶೇರುಗಳಲ್ಲಿ ‘ಬಂಧಿತ ’ಹೂಡಿಕೆದಾರರು: ವರದಿ

Similar News