ಮಹಿಳೆಯರು ಸುಸ್ಥಿರ ಆರೋಗ್ಯವಂತರಾಗಬೇಕು: ಸುಮಿತ್ರಾ ನಾಯಕ್

ಉಡುಪಿ: ಆಯುಷ್ಮತಿ ಕ್ಲಿನಿಕ್ ಉದ್ಘಾಟನೆ

Update: 2023-03-27 13:43 GMT

ಉಡುಪಿ, ಮಾ.27: ಮಹಿಳೆಯರು ತಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ಸಕಾಲದಲ್ಲಿ  ಸೂಕ್ತ ತಪಾಸಣೆ ಮಾಡಿಸಿಕೊಳ್ಳದೇ ಇದ್ದಲ್ಲಿ ಅದರಿಂದ ಆಕೆಯ ಆರೋಗ್ಯ ಮಾತ್ರವಲ್ಲದೇ, ಆಕೆಯ ಕುಟುಂಬ ಮತ್ತು ಸಮಾಜದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ಮಹಿಳೆಯರು ಸುಸ್ಥಿರ ಆರೋಗ್ಯವಂತರಾಗಿರಲು ಆಯುಷ್ಮತಿ ಕ್ಲಿನಿಕ್‌ಗಳು ಸಹಕಾರಿ ಯಾಗಲಿವೆ ಎಂದುನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಹೇಳಿದ್ದಾರೆ.

ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಇವರ ಸಹಯೋಗದಲ್ಲಿ, ಉಡುಪಿಯ ಅಲಂಕಾರ್ ಚಿತ್ರಮಂದಿರದ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಿಸಿರುವ ಆಯುಷ್ಮತಿ ಕ್ಲಿನಿಕ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳು ತಮ್ಮ ಹಲವು ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಒಂದೇ ಕಡೆಯಲ್ಲಿ ಪರೀಕ್ಷಿಸಿ ಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹಲವು  ಕಾಯಿಲೆಗಳನ್ನು ಸಕಾಲದಲ್ಲಿ ಪರೀಕ್ಷಿಸಿಕೊಳ್ಳದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ವೆನ್ನುವಂತೆ ಆಯುಷ್ಮತಿ ಕೇಂದ್ರವನ್ನು ಆರಂಭಿಸಿರುವುದರಿಂದ, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳು ಇನ್ನು ಈ ಕ್ಲಿನಿಕ್‌ನಲ್ಲಿ ತಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಜಿಲ್ಲೆಯ ಮಹಿಳೆಯರು ಈ ಕೇಂದ್ರದ ಸಂಪೂರ್ಣ ಪ್ರಯೋಜನ ಪಡೆದು ಸುಸ್ಥಿರ ಆರೋಗ್ಯ ಪಡೆಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ಆಯುಷ್ಮತಿ ಕ್ಲಿನಿಕ್‌ನಲ್ಲಿ ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಪ್ರತೀ ದಿನ ಒಬ್ಬ ತಜ್ಞ ವೈದ್ಯರ ಸೇವೆಯು ಲಭ್ಯವಿರಲಿದ್ದು, ಈ ಕ್ಲಿನಿಕ್‌ನಲ್ಲಿ ಲ್ಯಾಬ್ ಪರೀಕ್ಷೆಗಳ ಸೇವೆ, ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಆಪ್ತ ಸಮಾಲೋಚನೆ ಮತ್ತು ಉಚಿತ ಔಷಧಿಗಳು ಸಹ ದೊರೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ  ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಹಾಗೂ ಇತರರು ಉಪಸ್ಥಿತರಿದ್ದರು.

Similar News