ಮೋದಿ-ಅದಾನಿ ಭಾಯ್ ಭಾಯ್: ಸಂಸತ್ ನಲ್ಲಿ ಮತ್ತೆ ಮೊಳಗಿದ ಘೋಷಣೆ

Update: 2023-03-27 17:13 GMT

ಹೊಸದಿಲ್ಲಿ, ಮಾ. 27: ‘‘ಮೋದಿ-ಅದಾನಿ ಭಾಯಿ-ಭಾಯಿ’’ ಎಂಬ ಪ್ರತಿಪಕ್ಷಗಳ ಘೋಷಣೆಗಳ ನಡುವೆಯೇ, ಹಣಕಾಸು ಮಸೂದೆಯನ್ನು ಸೋಮವಾರ ರಾಜ್ಯ ಸಭೆ ಅಂಗೀಕರಿಸಿತು ಹಾಗೂ ಲೋಕಸಭೆಗೆ ಹಿಂದಿರುಗಿಸಿತು.

ರಾಹುಲ್ ಗಾಂಧಿಯ ಅನರ್ಹತೆ ಮತ್ತು ಅದಾನಿ ವಿವಾದ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದಾಗ, ಆರಂಭದಲ್ಲಿ ರಾಜ್ಯಸಭೆಯನ್ನು ಬೆಳಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು. ಅದಕ್ಕೂ ಮುನ್ನ ಕಾಂಗ್ರೆಸ್ ಸಂಸದರು ಸಭಾಧ್ಯಕ್ಷರ ಪೀಠದತ್ತ ಕಾಗದಗಳನ್ನು ಎಸೆದಾಗ ಲೋಕಸಭೆಯನ್ನು ಸಂಜೆ 4 ಗಂಟೆಯವರೆಗೆ ಮುಂದೂಡಲಾಯಿತು.

ಸದನ ಆರಂಭವಾಗುತ್ತಿದ್ದಂತೆಯೇ, ಕಾಂಗ್ರೆಸ್ ಸಂಸದರಾದ ಟಿ.ಎನ್. ಪ್ರತಾಪನ್ ಹಿಬಿ ಎಡನ್, ಜ್ಯೋತಿ ಮಣಿ ಎಸ್ ಮತ್ತು ರಮ್ಯ ಹರಿದಾಸ್ ಸದನದ ಮಧ್ಯ ಭಾಗಕ್ಕೆ ಧಾವಿಸಿ ತಮ್ಮ ಕೈಯಲ್ಲಿದ್ದ ಕಾಗದಗಳನ್ನು ಹರಿದು ಸ್ಪೀಕರ್ ಓಮ್ ಬಿರ್ಲಾರತ್ತ ಎಸೆದರು. ಕೆಲವು ಸಂಸದರು ಸ್ಪೀಕರ್ರತ್ತ ಕಪ್ಪು ಬಟ್ಟೆಗಳನ್ನು ಬೀಸಿದರು. ಆಗ ಬಿರ್ಲಾ ಸದನವನ್ನು ಸಂಜೆ 4 ಗಂಟೆಯವರೆಗೆ ಮುಂದೂಡಿದರು.

ಪ್ರತಿಪಕ್ಷ ಸಂಸದರು ನಿರಂತರವಾಗಿ ‘ಮೋದಿ-ಅದಾನಿ ಭಾಯಿ-ಭಾಯಿ’ ಎಂಬ ಘೋಷಣೆಗಳನ್ನು ಕೂಗಿದರು.

ಗುಜರಾತ್ ನಲ್ಲಿ 16 ಶಾಸಕರ ಅಮಾನತು

ಸೋಮವಾರ, ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ 16 ಕಾಂಗ್ರೆಸ್ ಶಾಸಕರನ್ನು ಹಾಲಿ ಬಜೆಟ್ ಅಧಿವೇಶನ ಮುಗಿಯುವವರೆಗೆ ಗುಜರಾತ್ ವಿಧಾನಸಭೆಯಿಂದ ಅಮಾನತುಗೊಳಿಸಲಾಯಿತು.

Similar News