ಅಮೃತಪಾಲ್ ಸಿಂಗ್ ನೇಪಾಳದಲ್ಲಿ ಅಡಗಿರುವ ಶಂಕೆ: ಪರಾರಿಯಾಗಲು ಅವಕಾಶ ನೀಡದಂತೆ ಭಾರತ ಮನವಿ ‌

Update: 2023-03-27 17:27 GMT

ಹೊಸದಿಲ್ಲಿ, ಮಾ. 27: ನೇಪಾಳದಲ್ಲಿ ಅಡಗಿದ್ದಾನೆ ಎಂದು ನಂಬಲಾದ ಸಿಕ್ಖ್ ಮೂಲಭೂತವಾದಿ ಪ್ರಚಾರಕ ಅಮೃತಪಾಲ್ ಸಿಂಗ್ ಇತರ ದೇಶಕ್ಕೆ ಪರಾರಿಯಾಗಲು ಅವಕಾಶ ನೀಡದಂತೆ ಹಾಗೂ ಆತ ಭಾರತೀಯ ಪಾಸ್‌ಪೋರ್ಟ್ ಅಥವಾ ಇತರ ಯಾವುದೇ ನಕಲಿ ಪಾಸ್‌ಪೋರ್ಟ್ ಬಳಸಿ ಪರಾರಿಯಾಗಲು ಪ್ರಯತ್ನಿಸಿದರೆ ಬಂಧಿಸುವಂತೆ ಭಾರತ ಸರಕಾರ ನೇಪಾಳ ಸರಕಾರಕ್ಕೆ ಮನವಿ ಮಾಡಿದೆ.

ರಾಯಭಾರಿ ಸೇವೆಗಳ ಇಲಾಖೆಗೆ ಶನಿವಾರ ರವಾನಿಸಿದ ಪತ್ರದಲ್ಲಿ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿ,  ಸಿಂಗ್ ನೇಪಾಳದಿಂದ ಪರಾರಿಯಾಗಲು ಪ್ರಯತ್ನಿಸಿದರೆ ಬಂಧಿಸಿ ಎಂದು ಮನವಿ ಮಾಡಿದೆ ಎಂದು ಕಾಠ್ಮಂಡು ಪೋಸ್ಟ್ ದಿನಪತ್ರಿಕೆ ವರದಿ ಮಾಡಿದೆ. ‘‘ಸಿಂಗ್ ಪ್ರಸ್ತುತ ನೇಪಾಳದಲ್ಲಿ ಅಡಗಿದ್ದಾನೆ’’ ಎಂದು ತನಗೆ ದೊರಕಿದ ಪತ್ರದ ಪ್ರತಿಯನ್ನು ಉಲ್ಲೇಖಿಸಿ ಪತ್ರಿಕೆ ಹೇಳಿದೆ. 

ಅಮೃತಪಾಲ್ ಸಿಂಗ್ ನೇಪಾಳದ ಮೂಲಕ ಇತರ ದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡದಂತೆ ವಲಸೆ ಇಲಾಖೆಗೆ ತಿಳಿಸಲು ಹಾಗೂ ಭಾರತೀಯ ಪಾಸ್‌ಪೋರ್ಟ್ ಅಥವಾ ಇತರ ಯಾವುದೇ ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಿಸಿ ನೇಪಾಳದಿಂದ ಪರಾರಿಯಾಗಲು ಪ್ರಯತ್ನಿಸಿದರೆ ಬಂಧಿಸುವಂತೆ ಗೌರವಾನ್ವಿತ ಸಚಿವಾಲಯವನ್ನು ಕೋರಲಾಗಿದೆ ಎಂದು ಅದು ತಿಳಿಸಿದೆ. 

ಈ ಪತ್ರ ಹಾಗೂ ಸಿಂಗ್‌ನ ವೈಯುಕ್ತಿಕ ವಿವರಗಳನ್ನು ಹೊಟೇಲ್‌ನಿಂದ ಹಿಡಿದು ವಿಮಾನ ಸಂಸ್ಥೆಗಳ ವರೆಗೆ ಎಲ್ಲ ಸಂಬಂಧಿತ ಏಜೆನ್ಸಿಗಳಿಗೆ ಕಳುಹಿಸಲಾಗಿದೆ ಎಂದು ಹಲವು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದ. ವಿಭಿನ್ನ ಗುರುತಿನೊಂದಿಗೆ ಹಲವು ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಸಿಂಗ್ ಮಾರ್ಚ್ 18ರಿಂದ ನಾಪತ್ತೆಯಾಗಿದ್ದಾನೆ. ಪೊಲೀಸರು ಆತನ ಬೇಟೆ ಮುಂದುವರಿಸಿದ್ದಾರೆ.

Similar News