ರಾಹುಲ್ ಹೇಳಿಕೆಗೆ ಅಸಮಾಧಾನ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಗೆ ಗೈರಾದ ಉದ್ಧವ್ ಠಾಕ್ರೆ

ಸೂಕ್ಷ್ಮ ವಿಚಾರಕ್ಕೆ ಪ್ರತಿಕ್ರಿಯಿಸದಿರಲು ಪ್ರತಿಪಕ್ಷಗಳ ನಿರ್ಧಾರ

Update: 2023-03-28 08:31 GMT

ಹೊಸದಿಲ್ಲಿ: ಸೋಮವಾರ ಸಂಜೆ ನಡೆದ ಕಾರ್ಯತಂತ್ರ ಸಭೆಯಲ್ಲಿ ಕಾಂಗ್ರೆಸ್  ಹಾಗೂ  17 ಪಕ್ಷಗಳ ಪ್ರತಿನಿಧಿಗಳು ವಿ.ಡಿ. ಸಾವರ್ಕರ್ ಅವರಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದರಿಂದ ದೂರ ಉಳಿಯಲು ನಿರ್ಧರಿಸಿವೆ.

ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಉದ್ಧವ್ ಠಾಕ್ರೆ ಅವರ ಅನುಪಸ್ಥಿತಿಯು ಎದ್ದು ಕಂಡಿತು. ಉದ್ದವ್  ಠಾಕ್ರೆ ಅವರು  ವಿಡಿ ಸಾವರ್ಕರ್ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಯಿಂದ ಅಸಮಾಧಾನಗೊಂಡಿದ್ದರು.  ಸಂಜೆಯ ಸಭೆಯಿಂದ ಹಿಂದೆ ಸರಿದಿದ್ದರು.

"ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ," ಎಂದು  ಇದು ಪ್ರಧಾನಿ ನರೇಂದ್ರ ಮೋದಿಯವರ ಉಪನಾಮದ ಮೇಲಿನ ಟೀಕೆಗಳಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬಳಿಕ  ಸಂಸದರಾಗಿ ಅನರ್ಹಗೊಂಡ ನಂತರ ರಾಹುಲ್  ಗಾಂಧಿಯವರು ಪ್ರತಿಕ್ರಿಯೆ ನೀಡಿದ್ದರು.

ಈ ಹೇಳಿಕೆಯಿಂದ   ಉದ್ದವ್  ಠಾಕ್ರೆಯವರ ಪಕ್ಷ  ತೀವ್ರವಾಗಿ ನೊಂದಿದೆ, ಬಲಪಂಥೀಯ ಐಕಾನ್ ಕುರಿತು ರಾಹುಲ್  ಗಾಂಧಿಯವರ ಹೇಳಿಕೆಗಳ ಬಗ್ಗೆ ಈ ಹಿಂದೆಯೂ ಆಕ್ಷೇಪಿಸಿತ್ತು. "ನಮ್ಮ ಆರಾಧ್ಯ ದೇವರನ್ನು ಅವಮಾನಿಸುವುದನ್ನು ನಿಲ್ಲಿಸದಿದ್ದರೆ  ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಮೂಡುತ್ತದೆ'' ಎಂದು ಠಾಕ್ರೆ ಎಚ್ಚರಿಸಿದ್ದರು.

"ಇಂದು ರಾತ್ರಿ 18 ವಿರೋಧ ಪಕ್ಷದ ನಾಯಕರು ಖರ್ಗೆ ಜಿ ಅವರ ನಿವಾಸದಲ್ಲಿ ಭೇಟಿಯಾದರು ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವ ಹಾಗೂ  ಎಲ್ಲಾ ಸಂಸ್ಥೆಗಳನ್ನು ಬುಡಮೇಲು ಮಾಡಿರುವ ಮೋದಿ ಆಡಳಿತದ ವಿರುದ್ಧ ತಮ್ಮ ಅಭಿಯಾನವನ್ನು ಒಂದೇ ಧ್ವನಿಯಲ್ಲಿ ಮುಂದುವರಿಸಲು ನಿರ್ಧರಿಸಿದರು. ಮೋದಿಯವರ ಭಯ ಹಾಗೂ  ಬೆದರಿಕೆ ರಾಜಕೀಯವನ್ನು ಎದುರಿಸಲು ತಮ್ಮ ಸಾಮೂಹಿಕ ಸಂಕಲ್ಪವನ್ನು ವ್ಯಕ್ತಪಡಿಸಿದರು.ಈ ಸಂಕಲ್ಪವು ಸಂಸತ್ತಿನ ಹೊರಗೆ ಈಗ ಆರಂಭವಾಗುವ ಜಂಟಿ ಕಾರ್ಯಗಳಲ್ಲಿ ಪ್ರತಿಫಲಿಸುತ್ತದೆ" ಎಂದು ಕಾಂಗ್ರೆಸ್ ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

Similar News