ಅಮೃತ್ ಪಾಲ್ ಸಿಂಗ್ ಶೋಧ ಕಾರ್ಯ ತೀವ್ರ ಹಿನ್ನೆಲೆ: BBC ಪಂಜಾಬಿ ನ್ಯೂಸ್ ಟ್ವಿಟರ್ ಖಾತೆಗೆ ತಡೆ

Update: 2023-03-28 08:33 GMT

ಹೊಸದಿಲ್ಲಿ: ಖಾಲಿಸ್ತಾನ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್ ಶೋಧ ಕಾರ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿಬಿಸಿ ಪಂಜಾಬಿ ನ್ಯೂಸ್ (BBC Punjabi News) ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ ಎಂದು thewire.in ವರದಿ ಮಾಡಿದೆ.

"ಕಾನೂನಾತ್ಮಕ ಆಗ್ರಹದ ಕಾರಣಕ್ಕೆ @bbcpunjabi ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ" ಎಂಬ ಸಂದೇಶವು ಆ ಪುಟದ ಮೇಲೆ ಪ್ರದರ್ಶನಗೊಳ್ಳುತ್ತಿದೆ. ಆದರೆ, ಈವರೆಗೆ ಆ ಕಾನೂನು ಆಗ್ರಹವೇನು ಎಂಬುದರ ಬಗ್ಗೆ ವಿವರ ಒದಗಿಸಿಲ್ಲ.

ಪಂಜಾಬ್ ಪೊಲೀಸರು ಅಮೃತ್ ಪಾಲ್ ಸಿಂಗ್‌ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಹಲವಾರು ಪತ್ರಕರ್ತರು ಹಾಗೂ ಸುದ್ದಿ ಜಾಲತಾಣಗಳ ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಈವರೆಗೆ ಎಷ್ಟು ಖಾತೆಗಳನ್ನು ತಡೆಹಿಡಿಯಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ. ತಡೆ ಹಿಡಿಯಲಾಗಿರುವ ಖಾತೆಗಳ ಪೈಕಿ ಪತ್ರಕರ್ತರು, ವಕೀಲರು ಹಾಗೂ ಮಾನವ ಹಕ್ಕು ಕಾರ್ಯಕರ್ತರ ಖಾತೆಗಳು ಸೇರಿವೆ.

ಅಮೃತಸರದಲ್ಲಿನ ಇಂಡಿಯನ್ ಎಕ್ಸ್‌ಪ್ರೆಸ್‌ ಸುದ್ದಿ ಸಂಸ್ಥೆಯ ಹಿರಿಯ ಸಿಬ್ಬಂದಿಯಾದ ಕಮಲ್‌ದೀಪ್ ಸಿಂಗ್ ಬ್ರಾರ್, ಸ್ವತಂತ್ರ ಪತ್ರಕರ್ತರಾದ ಗಗನ್‌ದೀಪ್ ಸಿಂಗ್ ಹಾಗೂ ಸಂದೀಪ್ ಸಿಂಗ್ ಸೇರಿದಂತೆ ಕನಿಷ್ಠ ಮೂವರು ಖ್ಯಾತ ಪತ್ರಕರ್ತರ ಖಾತೆಗಳು ಅಮಾನತುಗೊಂಡಿವೆ.

ಸುದ್ದಿ ಜಾಲತಾಣವಾದ ಬಾಝ್ ನ್ಯೂಸ್‌ನ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ. ಸಂಗ್ರೂರ್ ಲೋಕಸಭಾ ಕ್ಷೇತ್ರದ ಸಂಸದ ಸಿಮ್ರಣ್‌ಜಿತ್ ಸಿಂಗ್ ಮಾನ್ ಅವರ ಖಾತೆಯನ್ನು ತಡೆಹಿಡಿಯಲಾಗಿದೆ. ಲೋಕಸಭಾ ಸದಸ್ಯರೊಬ್ಬರ ಖಾತೆಯನ್ನು ತಡೆಹಿಡಿದಿರುವುದು ಗಮನಾರ್ಹ ಮತ್ತು ವಿರಳ ಸಂಗತಿಯಾಗಿದೆ. ಇದಲ್ಲದೆ ನ್ಯೂ ಡೆಮಾಕ್ರಟಿಕ್ ಪಾರ್ಟಿಯ ನಾಯಕ ಹಾಗೂ ಕೆನಡಾ ಸಂಸದ ಜಗ್ಮೀತ್ ಸಿಂಗ್ ಅವರ ಖಾತೆಯನ್ನೂ ತಡೆಹಿಡಿಯಲಾಗಿದ್ದು, ಅವರ ಖಾತೆಯು ಭಾರತದಲ್ಲಿ ವೀಕ್ಷಿಸಲು ಲಭ್ಯವಿಲ್ಲ.

ಕಳೆದ ವಾರದಿಂದ ಪಂಜಾಬ್ ನಿವಾಸಿಗಳಲ್ಲದೆ ಸಂಸದರು, ಪತ್ರಕರ್ತರು, ಸಿಖ್ ಪ್ರಭಾವ ಹೆಚ್ಚಿರುವ ಕೆನಡಾ ಮೂಲದ ಸುದ್ದಿ ಸಂಸ್ಥೆಗಳ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನೂ ಗುರಿಯಾಗಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಈ ನಡುವೆ, ಮಾನವ ಹಕ್ಕು ಕಾರ್ಯಕರ್ತರು, ಪತ್ರಕರ್ತರು ಹಾಗೂ ವಕೀಲರ ಖಾತೆಗಳನ್ನು ಅಮಾನತುಗೊಳಿಸಿರುವ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮಸೀದಿಗೆ ನುಗ್ಗಿದ ದುಷ್ಕರ್ಮಿಗಳಿಂದ 'ಜೈ ಶ್ರೀ ರಾಮ್‌' ಹೇಳಲು ನಿರಾಕರಿಸಿದ ಇಮಾಮರ ಗಡ್ಡ ಕತ್ತರಿಸಿ ಹಲ್ಲೆ

Similar News