ಸಾವರ್ಕರ್‌ ಟೀಕೆ| ಠಾಕ್ರೆ ಎಚ್ಚರಿಕೆ ಬಳಿಕ ರಂಗ ಪ್ರವೇಶಿಸಿದ ಶರದ್ ಪವಾರ್;‌ ಮೈತ್ರಿ ಪಕ್ಷದಲ್ಲಿ ಸಮನ್ವಯತೆ

Update: 2023-03-28 12:37 GMT

ಮುಂಬೈ: ವಿ.ಡಿ. ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿಯವರ ಕಟು ಟೀಕೆಗಳ ಕುರಿತು ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿಯಲ್ಲಿ ತೀವ್ರ ಒತ್ತಡ ಉಂಟಾಗಿದ್ದು, ಸಮನ್ವಯತೆಗೆ  ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮುಂದೆ ಬಂದಿದ್ದಾರೆ. ಈ ವಿಷಯದ ಬಗ್ಗೆ ಶಿವಸೇನೆಯ ಕಳವಳವನ್ನು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸುವ ಮೂಲಕ ಪವಾರ್‌ ರಂಗ ಪ್ರವೇಶಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಅದರ ಮೈತ್ರಿ ಪಕ್ಷವಾದ ಎನ್‌ಸಿಪಿ ಮತ್ತು ಶಿವಸೇನೆಯಲ್ಲಿ ಅಸಮಾಧಾನಕ್ಕೆ ಕಾರಣವಾದ ಸಾವರ್ಕರ್ ಬಗೆಗಿನ ಟೀಕೆಯನ್ನು ಕಡಿಮೆಗೊಳಿಸಲು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ಪವಾರ್‌ ಹೇಳಿದ್ದಾರೆ.

ಸೋಮವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿದ್ದ ವಿಪಕ್ಷ ನಾಯಕರ ಸಭೆಯಲ್ಲಿ ಪವಾರ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಸಾವರ್ಕರ್ ಅವರನ್ನು ಗುರಿಯಾಗಿಸುವುದು ರಾಜ್ಯದಲ್ಲಿ ವಿರೋಧ ಪಕ್ಷಗಳ ಮೈತ್ರಿಗೆ ಹಿನ್ನೆಡೆ ಉಂಟು ಮಾಡುತ್ತದೆ ಎಂದು ಕಾಂಗ್ರೆಸ್‌ ಗಮನಕ್ಕೆ ತರಲಾಗಿದೆ ಎಂದು ವರದಿಯಾಗಿದೆ.   

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಉಪಸ್ಥಿತರಿದ್ದರು.

ಸಾವರ್ಕರ್ ಎಂದಿಗೂ ಆರೆಸ್ಸೆಸ್ ಸದಸ್ಯರಾಗಿರಲಿಲ್ಲ ಎಂದು ರಾಹುಲ್ ಗಾಂಧಿಗೆ ಹೇಳಿದ ಪವಾರ್, ವಿರೋಧ ಪಕ್ಷಗಳ ನಿಜವಾದ ಹೋರಾಟ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧವಾಗಿದೆ ಎಂದು ಒತ್ತಿ ಹೇಳಿದ್ದಾರೆ ಎಂದು ವರದಿಯಾಗಿದೆ.

Similar News