ಕೋರ್ಟ್‌ ಆದೇಶವಿದೆ ಎಂದು ಬುಲ್ಡೋಝರ್‌ ಎದುರು ವ್ಯಕ್ತಿಯೊಬ್ಬರು ಪ್ರತಿಭಟಿಸುವ ವಿಡಿಯೋ ವೈರಲ್: ಸ್ಪಷ್ಟೀಕರಣ ನೀಡಿದ BMC

ಬಿಎಂಸಿ ಅಧಿಕಾರಿಯ ವರ್ತನೆಗೆ ನೆಟ್ಟಿಗರ ಆಕ್ರೋಶ

Update: 2023-03-29 15:26 GMT

ಮುಂಬೈ: ಇಲ್ಲಿನ ಸಾಂತಾಕ್ರುಝ್‌ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬುಲ್ಡೋಝರ್‌ ಮೂಲಕ ಅಂಗಡಿಗಳನ್ನು ನೆಲಸಮಗೊಳಿಸುವ ವಿಡಿಯೋ ವೈರಲ್‌ ಆಗಿದೆ. ತನ್ನಲ್ಲಿ  ಕೋರ್ಟ್‌ ಆದೇಶ ಪ್ರತಿ ಇದೆ, ಕೆಡವಬೇಡಿ ಎಂದು ಹಿರಿಯ ನಾಗರಿಕರೊಬ್ಬರು ಅಧಿಕಾರಿಗಳಲ್ಲಿ ಹೇಳಿ, ಬುಲ್ಡೋಝರ್‌ ತಡೆಯಲು ಪ್ರಯತ್ನಿಸಿದ್ದರಾದರೂ, ಅಧಿಕಾರಿಗಳು ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರಲಿಲ್ಲ ಎಂದು ಆರೋಪಿಸಲಾಗಿದೆ. 

ಘಟನೆಯ ವಿಡಿಯೋವನ್ನು ಟ್ವಿಟರಿನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, “ಹಿರಿಯ ನಾಗರಿಕ ತನ್ನಲ್ಲಿ ಕೋರ್ಟ್‌ ಆದೇಶ ಇದೆ ಎಂದು ಹೇಳುತ್ತಿದ್ದಾರೆ, ಆದರೆ, ನಾನು ಕೋರ್ಟ್‌ ಆದೇಶ ಒಪ್ಪುವುದಿಲ್ಲ ಎಂದು ಅಧಿಕಾರಿ ಹೇಳುತ್ತಿದ್ದಾರೆ” ಎಂದು ಬರೆದಿದ್ದಾರೆ. 

“ಇದು ಮುಂಬೈಯ ಸಂತಾಕ್ರೂಝ್‌ನಲ್ಲಿ ನಡೆದಿದೆ, ಆ ಹಿರಿಯ ವ್ಯಕ್ತಿ ಹಾಜಿ ರಫತ್‌ ಹುಸೈನ್‌, ಹಾಗೂ ಆ ಮಹಿಳೆ ಬಿಎಂಸಿಯ ಅಧಿಕಾರಿ” ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ. 

ಈ ಘಟನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಬಿಎಂಸಿ ಸ್ಪಷ್ಟನೆ ನೀಡಿದ್ದು, “ಅಕ್ರಮವಾಗಿ ತಗಡು ಶೀಟಿನಲ್ಲಿ ನಿರ್ಮಿಸಿದ್ದ 6 ಅಂಗಡಿಗಳನ್ನು ಸಾಂತಕ್ರಾಝ್‌ ನಿಲ್ದಾಣದ ಬಳಿ ನಿರ್ಮಿಸಲಾಗಿದೆ, ಪೊಲೀಸ್‌ ಬಂದೋಬಸ್ತಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಅಕ್ರಮ ಅಂಗಡಿಗಳಿಗೆ ಘನ ನ್ಯಾಯಾಲಯ ಯಾವುದೇ ತಡೆ ಆಜ್ಞೆ ನೀಡಿಲ್ಲ” ಎಂದು ಹೇಳಿದೆ.

Similar News