ಮೋದಿ ವರ್ಸಸ್ (ರಾಹುಲ್) ಗಾಂಧಿ

Update: 2023-03-30 07:23 GMT

ಒಂದು ಚಿಕ್ಕ ಸಂಶಯ: ಕೋಲಾರದಲ್ಲಿ ಹೇಳಿದ ಮಾತು ಪ್ರಕಟವಾದದ್ದು ಯಾರ ಮೂಲಕ? ಪತ್ರಿಕೆ ಅಥವಾ ಟಿವಿ ಚಾನೆಲ್‌ಗಳ ಮೂಲಕ. ಹಾಗಿದ್ದರೆ ಈ ಮಾತುಗಳನ್ನು ಹೇಳಿದವರು ಮಾತ್ರವಲ್ಲ, ಅದನ್ನು ಹಂಚಿದವರು, ಪ್ರಕಟಿಸಿದವರು ಇದಕ್ಕೂ ಹೆಚ್ಚು ಜವಾಬ್ದಾರರಲ್ಲವೇ? ಅವರೇಕೆ ಆರೋಪಿಗಳಲ್ಲ? ಅಥವಾ ಅವರನ್ನು ಆರೋಪಿಗಳಾಗಿಸದೇ ಇದ್ದರೆ ನ್ಯಾಯಾಲಯವು ದಂಡ ಪ್ರಕ್ರಿಯಾ ಸಂಹಿತೆಯನ್ವಯ ಅಂತಹವರನ್ನು ಆರೋಪಿಗಳಾಗಿ ಸೇರಿಸಬೇಕಿತ್ತಲ್ಲವೇ? ಇಷ್ಟಕ್ಕೂ ಕೋಲಾರದಲ್ಲಿ ಮಾಡಿದ ಭಾಷಣ, ಆಡಿದ ಮಾತುಗಳು ಸೂರತ್‌ನ ಭೌಗೋಳಿಕ ವ್ಯಾಪ್ತಿಗೆ ಸೇರುವ ಅಂಶಗಳು ಯಾವುವು?


ಸೂರತ್‌ನ ನ್ಯಾಯಾಲಯವೊಂದು ಮಾನಹಾನಿಯ ಕ್ರಿಮಿನಲ್ ಪ್ರಕರಣವೊಂದರಲ್ಲಿ ರಾಹುಲ್‌ಗಾಂಧಿಗೆ ಎರಡು ವರ್ಷಗಳ ಸೆರೆಮನೆವಾಸದ ಮತ್ತು 15,000 ರೂ.ಗಳ ದಂಡವನ್ನು ವಿಧಿಸಿ ಶಿಕ್ಷೆಯನ್ನು ನೀಡಿದೆ. ಇಂತಹ ಎಲ್ಲ ಪ್ರಕರಣಗಳಲ್ಲಿ ನಡೆಯುವಂತೆ ಈ ಶಿಕ್ಷೆಯನ್ನು ಮೇಲ್ಮನವಿಯ ಅವಧಿಯಾದ ಒಂದು ತಿಂಗಳ ವರೆಗೆ ಅಮಾನತ್ತಿನಲ್ಲಿಟ್ಟಿದೆ. ಸಾಮಾನ್ಯವಾಗಿ ಇದೊಂದು ಸುದ್ದಿಯೇ ಆಗುತ್ತಿರಲಿಲ್ಲ. ಏಕೆಂದರೆ ದಿನ ನಿತ್ಯ ನೂರಾರು ಮಂದಿ ಇದಕ್ಕಿಂತ ಹೆಚ್ಚಿನ ಸೆರೆಮನೆವಾಸವನ್ನು ಪಡೆಯುತ್ತಾರೆ. ಕೊಲೆ, ಸುಲಿಗೆ, ಭ್ರಷ್ಟಾಚಾರ, ಅತ್ಯಾಚಾರ, ಭಯೋತ್ಪಾದನೆ ಹೀಗೆ ಭಾರತದ ಕಾನೂನುಗಳಲ್ಲಿರುವ ಎಲ್ಲಾ ಅಪರಾಧ ಸಂಹಿತೆಗಳು ಪ್ರಯೋಗದಲ್ಲಿವೆ. ಆದರೆ ಈ ಸುದ್ದಿಗೆ ಮಹತ್ವ ಬಂದದ್ದು ಆತ-1. ರಾಹುಲ್ ಗಾಂಧಿ; 2. ಒಬ್ಬ ಸಂಸದ; ಮಾಜಿ ಪ್ರಧಾನಿಯೊಬ್ಬರ ಮಗ, ಮೊಮ್ಮಗ ಮತ್ತು ಮರಿಮಗ; 4. ಕಾಂಗ್ರೆಸಿನ ಮುಂದಾಳು; ಎಂಬ ಕಾರಣದಿಂದ. ಇದು ಇಷ್ಟಕ್ಕೇ ಮುಗಿಯಲಿಲ್ಲ. ತಕ್ಷಣ ಅಂದರೆ 24 ಗಂಟೆಗಳೊಳಗೆ ಆತನನ್ನು ಸಂಸತ್ತಿನಿಂದ 'ನಿಯಮಾನುಸಾರ' ಅನರ್ಹಗೊಳಿಸಲಾಯಿತು. ಇದರ ಮುಂದುವರಿದ ಭಾಗವಾಗಿ ಆತನಿಗೆ ನೀಡಲಾದ ಸರಕಾರಿ ವಸತಿಯಿಂದ 1 ತಿಂಗಳ ಒಳಗೆ ಖಾಲಿಮಾಡಲು (ಅದೂ 'ನಿಯಮಾನುಸಾರ') ಆದೇಶಿಸಲಾಯಿತು.

ಕಾಂಗ್ರೆಸಿಗರು ಈ ಕಾರಣ/ನೆಪವಾಗಿ ಒಟ್ಟಾದರು. ಇತರ ಪ್ರತಿಪಕ್ಷಗಳೂ ಅವರೊಂದಿಗೆ ಸೇರಿ ಪ್ರತಿಭಟಿಸಿದವು. ಇದ್ದಕ್ಕಿದ್ದಂತೆಯೇ ಕಾಂಗ್ರೆಸ್ ನಾಯಕಿ ತನ್ನನ್ನು 2019ರಲ್ಲಿ 'ಶೂರ್ಪನಖಿ' ಯೆಂದು ಅಣಕಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರ ವಿರುದ್ಧ ಮಾನನಷ್ಟ ಪ್ರಕರಣವನ್ನು ದಾಖಲಿಸುವುದಾಗಿ ವೀರಾವೇಶದಿಂದ ಕೂಗಾಡಿದರು. (ಅದೀಗ ಮಾನಹಾನಿಗೆ ನಿಗದಿ ಪಡಿಸಿದ 1 ವರ್ಷದ ಅವಧಿಬಾಧಿತವಾಗಿದೆ.) ಎಂದಿನಂತೆಯೇ ಭಾರತೀಯ ಜನತಾ ಪಕ್ಷದ ಬಹುತೇಕ ಎಲ್ಲರೂ ಈ 'ಸಾವಿನ ಸಂಭ್ರಮ'ವನ್ನು ಯಥೇಚ್ಛ ಉಂಡರು. ಕೆಲವರು ರಾಹುಲ್ ಗಾಂಧಿಯ ರಾಜಕೀಯ ಪರಿಣತಿಯನ್ನು, ಆನುವಂಶಿಕತೆಯನ್ನು ಕೆದಕಿದರು; ಸ್ಮತಿ ಇರಾನಿ ಎಂಬಾಕೆ ರಾಹುಲ್‌ನನ್ನು ಸೋನಿಯಾ ಗಾಂಧಿಯ 'ಸಂಸ್ಕಾರ'ವೆಂದರು. ಇವೆಲ್ಲದರ ನಡುವೆಯೂ ಕಾನೂನು ನೀಡಿದ ಶಿಕ್ಷೆ, ದಂಡ ಮತ್ತು ಅವುಗಳ ಪರಿಣಾಮ ಉಳಿದಿವೆ.

ಇಷ್ಟಕ್ಕೂ ಕಾನೂನಿನಡಿ ಈ ಅಪರಾಧ ಮತ್ತು ಶಿಕ್ಷೆಯ ಕುರಿತು ಬಹುತೇಕ ರಾಜಕಾರಣಿಗಳು ಚಿಂತಿಸಿದಂತಿಲ್ಲ. ಎಲ್ಲರೂ ರಾಜಕೀಯ ಪಕ್ಷಗಳ ಪ್ರಶ್ನಾತೀತ ಸಿಬ್ಬಂದಿಯಾಗಿರುವುದರಿಂದ ಅವರಿಂದ ತೆರೆದ ಮನಸ್ಸನ್ನು ನಿರೀಕ್ಷಿಸುವುದು ಕಷ್ಟ. ಪೊಲೀಸರ ಹಾಗೆ ಅವರು ತಮ್ಮ ಒಡೆಯರ ಕಟ್ಟಪ್ಪಗಳು. ಈ ಬಗ್ಗೆ ಸಾರ್ವಜನಿಕರು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೋ ಗೊತ್ತಿಲ್ಲ. ಏಕೆಂದರೆ ಬಹಳಷ್ಟು ಪ್ರಜೆಗಳು ಗಾಳಿ ಬಂದೆಡೆ ವಿಹರಿಸುವವರು ಮತ್ತು ಗಾಳಿ ಬಂದಾಗ ತೂರಿಕೊಳ್ಳುವವರು; ಗೆದ್ದೆತ್ತಿನ ಬಾಲ ಹಿಡಿಯುವವರು. ಪ್ರಜೆಗಳು ವಂಚಕರಲ್ಲದಿದ್ದರೆ ನಾಯಕರು ವಂಚಕರಾಗುವುದು ಹೇಗೆ?

ಮಾನಹಾನಿಯು ಸಿವಿಲ್ ಮತ್ತು ಕ್ರಿಮಿನಲ್ ಎರಡು ವಿಧದಲ್ಲೂ ಪರಿಣಾಮವಿರುವಂಥದ್ದು. ಸಿವಿಲ್ ಪ್ರಕ್ರಿಯೆಯಲ್ಲಿ ಅವನ್ನು ಹಣರೂಪದ ನಷ್ಟದ ಮೂಲಕ ಅಳೆಯಲಾಗುತ್ತದೆ. ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಅವನ್ನು ದಂಡ, ಇಲ್ಲವೇ ಸೆರೆಮನೆ ವಾಸದ, ಶಿಕ್ಷೆ ಅಥವಾ ಇವೆರಡನ್ನೂ ಜೋಡಿಸಿ ಶಿಕ್ಷಿಸುವ ಮೂಲಕ ಅಳೆಯಲಾಗುತ್ತದೆ. ಈ ಕಾನೂನು ಬಹಳಷ್ಟು ಚರಿತ್ರೆಯುಳ್ಳದ್ದು, ವಿಸ್ತಾರದ್ದು ಮತ್ತು ಸಾಕಷ್ಟು ಸ್ಥಳಾವಕಾಶವನ್ನು ಬಯಸುವಂಥದ್ದು. ಆದ್ದರಿಂದ ಸದ್ಯ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನನ್ನು ಗಮನಿಸೋಣ:

ಭಾರತೀಯ ದಂಡ ಸಂಹಿತೆ (ಐಪಿಸಿ ಅಂದರೆ ಇಂಡಿಯನ್ ಪೀನಲ್ ಕೋಡ್ ಎಂದು ಚಾಲ್ತಿಯಲ್ಲುಳ್ಳದ್ದು) ಯ ಕಲಮು 499 ಮಾನಹಾನಿಯನ್ನು ನಿರೂಪಿಸುತ್ತದೆ; ಇದರನ್ವಯ ಯಾರೇ ಆಗಲಿ ಒಬ್ಬನ ಕುರಿತು ಮಾತಿನ ಮೂಲಕ, ಅಥವಾ ಓದಬಲ್ಲ, ನೋಡಬಲ್ಲ, ಕೇಳಬಲ್ಲ ಯಾವುದೇ ಮಾಧ್ಯಮದ ಮೂಲಕ ಆ ವ್ಯಕ್ತಿಯ ಪ್ರತಿಷ್ಠೆಗೆ ಕುಂದು ತರುವ ಕೃತ್ಯವನ್ನು ಎಸಗಿದ್ದಾದರೆ ಅಥವಾ ಆ ಕೃತ್ಯವು ಉದ್ದೇಶಿತ ವ್ಯಕ್ತಿಯ ಪ್ರತಿಷ್ಠೆಯನ್ನು ಕುಗ್ಗಿಸುವುದಾದರೆ ಅದು ಮಾನಹಾನಿಯಾಗುತ್ತದೆ. ಕಲಮು 500 ಮಾನಹಾನಿಗೆ ವಿಧಿಸಲಾದ ದಂಡನೆಯನ್ನು ಹೇಳುತ್ತದೆ. ಕಲಮು 501 ಮಾನಹಾನಿಯಾಗುವಂಥದ್ದು ಎಂದು ತಿಳಿದೂ ಮುದ್ರಿಸುವುದನ್ನು ಅಥವಾ ಕೆತ್ತುವುದನ್ನು ಮತ್ತು ಕಲಮು 502 ಈ ರೀತಿ ಮುದ್ರಿತ ಅಥವಾ ಕೆತ್ತಲಾದ ಸಾಮಗ್ರಿಗಳನ್ನು ಮಾರುವುದನ್ನು ಅಥವಾ ಹಂಚುವುದನ್ನು ಶಿಕ್ಷಾರ್ಹವಾಗಿಸಿದೆ. ಈ ಎಲ್ಲ ಅಪರಾಧಗಳಿಗೂ ದಂಡನೆಯೆಂದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಸಾದಾ ಸೆರೆಮನೆವಾಸ ಅಥವಾ ಹಣರೂಪದ ದಂಡ, ಅಥವಾ ಇವೆರಡೂ. ಹಣರೂಪದ ದಂಡದ ಕನಿಷ್ಠ ಅಥವಾ ಗರಿಷ್ಠ ಮೊತ್ತವನ್ನು ಕಾನೂನು ಹೇಳಿಲ್ಲ.

ಮಾನಹಾನಿಯೆಂದರೆ ಇದೇ ಅಥವಾ ಹೀಗೆಯೇ ಎಂದು ಹೇಳಲಾಗದು. ಅದು ಸಂದರ್ಭ, ವ್ಯಕ್ತಿತ್ವ, ಅಂತಸ್ತು, ಸ್ವಭಾವ, ಮುಂತಾದ ಅನೇಕ ಮುಖಗಳನ್ನು ಹೊಂದಿದೆ. ಯಾವುದು ಒಬ್ಬನಿಗೆ ಮಾನಹಾನಿಯೋ ಅದು ಇನ್ನೊಬ್ಬನಿಗೆ ಮಾನಹಾನಿಯಾಗದು. ಉದಾಹರಣೆಗೆ ರಾಜಕಾರಣಿಗಳಿಗೆ ಯಾವುದೂ ಮಾನಹಾನಿಯಲ್ಲವೆಂದೇ ಜನರು ತಿಳಿಯುತ್ತಾರೆ. ಉಗಿಯುವುದು, ಉಗಿಸಿಕೊಳ್ಳುವುದು ಅವರಿಗೆ ಉಸಿರಾಟದಷ್ಟೇ ಸಹಜ. ರಾಜಕಾರಣದಲ್ಲಿ ಮಾನಹಾನಿಯ ಪ್ರಕರಣಗಳು ರಾಜಕೀಯ ಕಾರ್ಯಕಾರಣಕ್ಕೆ ಸೃಷ್ಟಿಯಾಗುತ್ತವೆಯೇ ಹೊರತು ಅಗತ್ಯವೆಂದಲ್ಲ. ಅನೇಕ ಬಾರಿ ಮಾನಹಾನಿ ಪ್ರಕರಣದ ಬದ್ಧ ಎದುರಾಳಿಗಳು ಒಂದೇ ಪಕ್ಷವನ್ನು ಸೇರಿದರೆ ಆ ಪ್ರಕರಣ ಮತ್ತು ಅದರ ಮಾನ ಅಳಿದುಹೋಗುತ್ತದೆ.

ಕಲಮು 499ರಲ್ಲಿ ಯಾವನೇ ವ್ಯಕ್ತಿಯ ವರ್ಚಸ್ಸು, ವ್ಯಕ್ತಿತ್ವ, ಪ್ರಸಿದ್ಧಿ, ಪ್ರತಿಷ್ಠೆ, ಗೌರವ, ಖ್ಯಾತಿ, ಯಶಸ್ಸುಗಳಿಗೆ (ಇವನ್ನೆಲ್ಲ ಕಾಯ್ದೆಯಲ್ಲಿ ಇಂಗ್ಲಿಷಿನ 'Reputation' ಎಂಬ ಒಂದು ಪದದ ಮೂಲಕ ನಿರೂಪಿಸಲಾಗಿದೆ. ಆಯಾಯ ಭಾಷೆಗಳಲ್ಲಿ ಇವಕ್ಕೆ ಪ್ರತ್ಯೇಕ ಸ್ಥಾನವಿದೆ.) ಇವು ಹೇಗೆ ಕಳೆದುಹೋಗುತ್ತವೆಂಬುದಕ್ಕೆ ಸಾದಾನಿಲುವಂಗಿಯ (Straight-Jacket) ಪ್ರಮೇಯಗಳಿಲ್ಲ. ನಮ್ಮಲ್ಲೊಬ್ಬರು ತನಗೆ ಚಪ್ಪಲಿಯಿಂದ, ಪೊರಕೆಯಿಂದ ಹೊಡೆದಿರಬಹುದು; ಸೆಗಣಿ ಬಳಿದಿರಬಹುದು; ಕತ್ತುಪಟ್ಟಿ ಹಿಡಿದು ಒದ್ದಿರಬಹುದು; ಆದರೆ ತಾನೆಂದೂ ಅವು ತನ್ನ ಮಾನಕ್ಕೆ ಕುಂದು ಮಾಡಿವೆಯೆಂದು ತಿಳಿದಿಲ್ಲ ಎನ್ನುತ್ತಿದ್ದರು. (ಅವರಿಗಾಗಿ ಅರ್ಥಕೋಶದಲ್ಲಿ ಮಾನಹಾನಿಯ ನಿರೂಪಣೆಯನ್ನು ಇನ್ನೂ ಹುಡುಕುತ್ತಿದ್ದೇನೆ!)

ಈ ಕಲಮಿನಲ್ಲಿ ನಾಲ್ಕು ವಿವರಣೆಗಳೂ ಯಾವುದು ಮಾನಹಾನಿಯಾಗು ವುದಿಲ್ಲವೆಂಬ 9 ಅಪವಾದಗಳನ್ನು ಹೇಳಿದೆ. ವಿವರಣೆಗಳಲ್ಲಿ ಸತ್ತ ವ್ಯಕ್ತಿಯ ಕುರಿತ ಆ ವ್ಯಕ್ತಿ ಬದುಕಿದ್ದರೆ ಮಾನಹಾನಿಯಾಗಬಲ್ಲ ಮಾತುಗಳೂ ಮಾನಹಾನಿಯೆಂದು ಹೇಳಲಾಗಿದೆ. ಹಾಗೆಯೇ ಒಂದು ಸಂಸ್ಥೆ ಅಥವಾ ಸಂಘ, ವ್ಯಕ್ತಿಗಳ ಸಮೂಹ ಕೂಡಾ ಸೇರಿದೆ. ವ್ಯಂಗ್ಯವೂ ಸೇರಿದೆ. ಅಪವಾದಗಳಲ್ಲಿ ಸಾರ್ವಜನಿಕ ಹಿತಾಸಕ್ತಿ, ಸತ್ಯ ನಿರೂಪಣೆ, ಸೂಕ್ತ ಪ್ರಾಧಿಕಾರಕ್ಕೆ ನೀಡಿದ ದೂರು, ಸರಕಾರಿ ನೌಕರನ ಸಾರ್ವಜನಿಕ ವರ್ತನೆ, ನ್ಯಾಯಾಲಯದ ನಡವಳಿಕೆಗಳ ವರದಿಗಳ ಪ್ರಕಟಣೆ, ಸೂಕ್ತ ಪ್ರಾಧಿಕಾರವು ಕಾನೂನು ಪ್ರಕಾರ ಹಾಕಿದ ಛೀಮಾರಿ ಮುಂತಾದ ಆದೇಶಗಳು, ಇತ್ಯಾದಿಗಳನ್ನು ಸೇರಿಸಿದೆ. ಹೇಗಿದ್ದರೂ ಇವನ್ನು ಪ್ರತೀ ಪ್ರಕರಣಗಳ ವಿಷಯ ಮತ್ತು ಸಂದರ್ಭಕ್ಕನುಗುಣವಾಗಿ ನಿರ್ಣಯಿಸಬೇಕೇ ಹೊರತು ಮಾದರಿ ನಿಯಮಗಳ ಮೂಲಕವಲ್ಲ. ಆದ್ದರಿಂದ ಒಂದು ಪ್ರಕರಣದ ತೀರ್ಪು ಅದೇ ಹಿನ್ನೆಲೆಯ ಇನ್ನೊಂದು ತೀರ್ಪಿಗೆ ಮಾದರಿಯಾಗಬಹುದೇ ವಿನಾ ಎಲ್ಲಾ ಪ್ರಕರಣಗಳಿಗಲ್ಲ. ಸಾಕಷ್ಟು ಪ್ರಕರಣಗಳು ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಮೆಟ್ಟಲು ಹತ್ತುತ್ತವೆ. ಅಂತಹ ಪ್ರಕರಣಗಳ ತೀರ್ಪುಗಳನ್ನು ಅಧೀನ ನ್ಯಾಯಾಲಯಗಳು ಸಂದರ್ಭಾನುಸಾರ ಅನುಸರಿಸಬೇಕಾಗುತ್ತದೆ.

ರಾಹುಲ್ ಗಾಂಧಿ ಪ್ರಕರಣದಲ್ಲಿ ಸೂರತ್‌ನ ಮುಖ್ಯ ನ್ಯಾಯಿಕ ದಂಡಾಧಿಕಾರಿ ಗಳು ನೀಡಿದ ತೀರ್ಪು ಗುಜರಾತಿ ಭಾಷೆಯಲ್ಲಿರುವುದರಿಂದ ಅದನ್ನು ತಕ್ಷಣ ವಿಶೇಷವಾಗಿ ಅಧ್ಯಯನ ಮಾಡಲು ತೊಡಕಾಗಿದೆ. ಆ ತೀರ್ಪಿನಲ್ಲಿ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಕೆಲವು ತೀರ್ಪುಗಳನ್ನಷ್ಟೇ ಇಂಗ್ಲಿಷಿನಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಆ ಕುರಿತು ಪೂರ್ಣ ವಿವರ ನನ್ನಲ್ಲಿಲ್ಲ. ಆದರೆ ಪ್ರಕರಣದ ಮುಖ್ಯ ಭೂಮಿಕೆಯಿರುವುದು ರಾಹುಲ್ ಗಾಂಧಿ ಹೇಳಿದ(ರೆನ್ನಲಾದ) ''ಅದು ಹೇಗೆ ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮವಿದೆ?'' ಅಥವಾ ಅದೇ ಅರ್ಥ ಬರುವ ಪದಗಳು. ಇದನ್ನು 2019ರಲ್ಲಿ ಕೋಲಾರದಲ್ಲಿ ರಾಹುಲ್ ಹೇಳಿದ್ದು ಈ ಬಗ್ಗೆ ಗುಜರಾತಿನ ಮಾಜಿ ಸಚಿವರೂ, ಶಾಸಕರೂ ಆಗಿರುವ ಪೂರ್ಣೇಶ ಮೋದಿ ಈ ಪ್ರಕರಣವನ್ನು ಸೂರತ್‌ನಲ್ಲಿ ದಾಖಲಿಸಿದ್ದರು. ಮೇಲ್ನೋಟಕ್ಕೆ ಇದನ್ನು ರಾಜಕೀಯ ಭಾಷಣವೊಂದರಲ್ಲಿ ಮಾಡಿದ ಟೀಕೆಯೆನ್ನಬಹುದು. ಸಾಮಾನ್ಯವಾಗಿ ರಾಜಕಾರಣಿಗಳು ದಪ್ಪಚರ್ಮದವರು. ಅನಗತ್ಯ ಅಥವಾ ಸೇಡಿನ ಕಾರಣಗಳಿಲ್ಲದಿದ್ದರೆ ಅವರು ಇಂತಹ ಟೀಕೆಗಳನ್ನು ಅಲಕ್ಷಿಸುವವರು.

ದೂರುದಾರರಿಗೆ ಮೋದಿ ಎಂಬ ಉಪನಾಮವಿದೆ. ಅದೇ ಸಮಯಕ್ಕೆ ನರೇಂದ್ರ ಮೋದಿ ಭಾರತದ ಪ್ರಧಾನಿ; ಹಾಗೆಯೇ ನೀರವ್ ಮೋದಿ, ಲಲಿತ್ ಮೋದಿ ಎಂಬಿಬ್ಬರು ದೇಶಭ್ರಷ್ಟ ಪಾತಕಿಗಳು. ನೂರಾರು ಅಥವಾ ಸಾವಿರಾರು ಮಂದಿ ಅಂತಹ ಉಪನಾಮವನ್ನು ಹೊಂದಿರುವಾಗ ಅದು ಯಾರನ್ನು ಕುರಿತು ಹೇಳಲಾಗಿದೆ ಎಂಬುದನ್ನು ಸಂದರ್ಭವೇ ಹೇಳುತ್ತದೆ. ಈ ಸಂದರ್ಭವನ್ನವಲೋಕಿಸಿದರೆ ಅದು ಇಬ್ಬರು ದೇಶಭ್ರಷ್ಟರನ್ನುದ್ದೇಶಿಸಿಯೇ ಹೇಳಲಾಗಿದೆಯೆನ್ನಿಸುತ್ತದೆ. ಇರಲಿ; ದೂರುದಾರರು ಇದರಿಂದ ತನಗೆ ಮಾನಹಾನಿಯಾಗಿದೆಯೆಂದು ನಿರೂಪಿಸಿದ್ದಾರೆಂದು ಮತ್ತು ನ್ಯಾಯಾಲಯವು ಇದನ್ನು ಮೋದಿ ಎಂಬ ಉಪನಾಮವನ್ನು ಹೊಂದಿರುವ ದೂರುದಾರರಿಗೆ ಮಾನಹಾನಿಯಾಗಿದೆಯೆಂದು ತೀರ್ಪು ನೀಡಿದೆ. ಇದನ್ನು ಅದರ ಮೇಲಿನ ನ್ಯಾಯಾಲಯವು ನಿರ್ಧರಿಸಬೇಕೇ ಹೊರತು ನಾವು-ನೀವಲ್ಲ. ಸದ್ಯ ರಾಹುಲ್ ದೋಷಿ.

ಆದರೆ ಸಮಸ್ಯೆ ಇಲ್ಲಿಗೇ ನಿಲ್ಲುವುದಿಲ್ಲ. ಇಂತಹ ಅಪರಾಧಗಳಿಗೆ ನೀಡುವ ಶಿಕ್ಷೆಯಾದರೂ ಎಂತಹದ್ದು? ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಮತ್ತು ಇತರ ಎಲ್ಲ ಕ್ರಿಮಿನಲ್ ಕಾನೂನಿನ ಅನುಷ್ಠಾನದಲ್ಲಿ ವಿಶೇಷ ಸಂದರ್ಭವಿಲ್ಲದಿದ್ದರೆ ಗರಿಷ್ಠ ಶಿಕ್ಷೆಯನ್ನು ನೀಡುವ ಪದ್ಧತಿಯಿಲ್ಲ. ಕೆಲವು ಕಾಯ್ದೆಗಳಲ್ಲಿ ಕನಿಷ್ಠ ಶಿಕ್ಷೆಯಿರುತ್ತದೆ. ಇಲ್ಲಿ ಅದೂ ಇಲ್ಲ. ಎರಡು ವರ್ಷಗಳ ವರೆಗೆ ವಿಧಿಸಬಹುದಾದ ಸಾದಾ ಸೆರೆಮನೆವಾಸ ಅಥವಾ/ಮತ್ತು ದಂಡ. ಈ ರೀತಿಯ ಶಿಕ್ಷೆಯನ್ನು ವಿಧಿಸಿದ ಉದ್ದೇಶವೇ ಇಲ್ಲಿ ವ್ಯಕ್ತಿಯು ಇತರ ಅಪರಾಧಿಗಳ ಸಾಲಿಗೆ ಸೇರಬಾರದು ಎಂಬುದಕ್ಕೆ. ಕೊಲೆ, ದರೋಡೆ, ಕಳ್ಳತನ ಮುಂತಾದ ಅಪರಾಧಗಳು ನಮ್ಮ ಸಮಾಜದ ನೈತಿಕ ನೆಲೆಗಟ್ಟನ್ನೇ ಪ್ರಶ್ನಿಸುವಂತಹವು ಮಾತ್ರವಲ್ಲ, ವ್ಯಕ್ತಿಯ, ಸ್ವತ್ತುಗಳ ರಕ್ಷಣೆಗೆ ಸವಾಲು ಒಡ್ಡುವಂತಹವು. ಹಾಗಿದ್ದರೂ ಅಲ್ಲೂ ಗರಿಷ್ಠ ಶಿಕ್ಷೆಗೆ ವಿಶೇಷ ಕಾರಣಗಳಿರಬೇಕು. ಉದಾಹರಣೆಗೆ ಕೊಲೆಗೆ ಮರಣದಂಡನೆಯು ಗರಿಷ್ಠ ಶಿಕ್ಷೆಯಾಗಿದ್ದು ಜೀವಾವಧಿ ಸೆರೆವಾಸವು ಕನಿಷ್ಠ ಶಿಕ್ಷೆಯಾಗಿದ್ದು ನ್ಯಾಯಾಲಯಗಳು ಅದನ್ನೇ ವಿಧಿಸುತ್ತವೆ. ಸರ್ವೋಚ್ಚ ನ್ಯಾಯಾಲಯವು 'ಅಪರೂಪದಲ್ಲೂ ಅಪರೂಪ'ದ (Rarest of the Rare) ಪ್ರಕರಣಗಳಲ್ಲಷ್ಟೇ ಮರಣದಂಡನೆಯನ್ನು ವಿಧಿಸತಕ್ಕದ್ದು ಎಂಬ ಆದೇಶವನ್ನು ಮಾಡಿದೆ. ಈ ನಿಯಮವು ಎಲ್ಲ ಅಪರಾಧಗಳಿಗೂ ಅನ್ವಯಿಸುತ್ತದೆ; ಅನ್ವಯಿಸಬೇಕು. ರಾಹುಲ್ ಗಾಂಧಿ ತೀರ್ಪಿನಲ್ಲಿ ಈ ರೀತಿಯ 'ಅಪರೂಪದಲ್ಲೂ ಅಪರೂಪ'ದ ಸನ್ನಿವೇಶವೇನು ಎಂಬುದನ್ನು ನ್ಯಾಯಾಲಯವು ಹೇಗೆ ನಿರ್ಧರಿಸಿತೆಂಬುದು ಕುತೂಹಲಕಾರಿ. ರಾಹುಲ್ ಚಾಳಿಬಿದ್ದ ಅಪರಾಧಿ (Habitual Offender) ಏನೂ ಅಲ್ಲ. ಅಲ್ಲದೆ ಈ ಗರಿಷ್ಠ ಶಿಕ್ಷೆಯು ರಾಹುಲ್‌ನ ಸಂಸದೀಯ ಸ್ಥಾನಕ್ಕೆ ಕುತ್ತು ತರಬಹುದೆಂದು ತಿಳಿಯದಷ್ಟು ಆ ನ್ಯಾಯಾಧೀಶರು ದಡ್ಡರಲ್ಲ. ಆದ್ದರಿಂದ ಇಂತಹ ಸಂದರ್ಭದಲ್ಲಿ ಅದೂ ಮೋದಿಯ ಗುಜರಾತಿನಲ್ಲಿ ಬಂದ ಈ ತೀರ್ಪು ಅನೇಕ ಇತರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಒಂದು ಚಿಕ್ಕ ಸಂಶಯ: ಕೋಲಾರದಲ್ಲಿ ಹೇಳಿದ ಮಾತು ಪ್ರಕಟವಾದದ್ದು ಯಾರ ಮೂಲಕ? ಪತ್ರಿಕೆ ಅಥವಾ ಟಿವಿ ಚಾನೆಲ್‌ಗಳ ಮೂಲಕ. ಹಾಗಿದ್ದರೆ ಈ ಮಾತುಗಳನ್ನು ಹೇಳಿದವರು ಮಾತ್ರವಲ್ಲ, ಅದನ್ನು ಹಂಚಿದವರು, ಪ್ರಕಟಿಸಿ ದವರು ಇದಕ್ಕೂ ಹೆಚ್ಚು ಜವಾಬ್ದಾರರಲ್ಲವೇ? ಅವರೇಕೆ ಆರೋಪಿಗಳಲ್ಲ? ಅಥವಾ ಅವರನ್ನು ಆರೋಪಿಗಳಾಗಿಸದೇ ಇದ್ದರೆ ನ್ಯಾಯಾಲಯವು ದಂಡ ಪ್ರಕ್ರಿಯಾ ಸಂಹಿತೆಯನ್ವಯ ಅಂತಹವರನ್ನು ಆರೋಪಿಗಳಾಗಿ ಸೇರಿಸಬೇಕಿತ್ತಲ್ಲವೇ? ಇಷ್ಟಕ್ಕೂ ಕೋಲಾರದಲ್ಲಿ ಮಾಡಿದ ಭಾಷಣ, ಆಡಿದ ಮಾತುಗಳು ಸೂರತ್‌ನ ಭೌಗೋಳಿಕ ವ್ಯಾಪ್ತಿಗೆ ಸೇರುವ ಅಂಶಗಳು ಯಾವುವು? ಇವೆಲ್ಲ ಮೇಲ್ಮನವಿಯಲ್ಲಿ ಮತ್ತೆ ಚರ್ಚೆಗೊಳಗಾಗಬಲ್ಲವು. ಈಗ ಸದ್ಯ ರಾಹುಲ್ ಅನರ್ಹತೆ ಕಾಂಗ್ರೆಸಿನ ಶಕ್ತಿಯನ್ನು ಗುಡುಗಿಸಿದೆಯೇ ಅಥವಾ ಉಡುಗಿಸಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಬಟ್ಟೆಯನ್ನು ಡ್ರೈಕ್ಲೀನ್ ಮಾಡುವ ಅವಧಿ ಅಥವಾ ಭಾರತೀಯ ಸ್ಟೇಟ್‌ಬ್ಯಾಂಕಿನ ಜಾಹೀರಾತಿನಲ್ಲಿ ಉಳಿತಾಯಖಾತೆ ತೆರೆಯಲು ಬೇಕಾಗುವ (ನೂಡಲ್ ತಯಾರಾಗುವ) ಅವಧಿ ಅಥವಾ ಬೆಲೆಯೇರಿಕೆಗಿಂತಲೂ ಶೀಘ್ರವಾಗಿ ರಾಹುಲ್ ಕುರಿತ ಕ್ರಮ ಜರುಗಿದೆ. ಇದರಲ್ಲಿ ಗುಜರಾತಿನವರೇ ಆಗಿರುವ ಪ್ರಧಾನಿಯ 'ದೊಡ್ಡಣ್ಣ'ನ ಮತ್ತು ಅಮಿತ್ ಶಾರ 'ಚಾಣಕ್ಯ' ಪ್ರವೃತ್ತಿ ಲಜ್ಜಾಹೀನವಾಗಿ ಪ್ರಕಟವಾಗಿದೆ. ಕರ್ನಾಟಕದಲ್ಲಿ ನೆಹರೂ ಓಲೆಕಾರ್ ಎರಡು ವರ್ಷ, ಎಂ.ಪಿ.ಕುಮಾರಸ್ವಾಮಿ ನಾಲ್ಕು ವರ್ಷ ಜೈಲು ಶಿಕ್ಷೆ ಪಡೆದಿದ್ದರೂ ಇನ್ನೂ ತಮ್ಮ ಶಾಸನಸಭಾ ಸ್ಥಾನವಂಚಿತರಾಗಿಲ್ಲ. ಏಕೆಂದರೆ ಅವರ್ಯಾರೂ ರಾಹುಲ್ ಗಾಂಧಿಯೂ ಅಲ್ಲ; ಪ್ರತಿಪಕ್ಷದವರೂ ಅಲ್ಲ.

ಲಕ್ಷದ್ವೀಪದ ಸಂಸದ ಪಿ.ಪಿ.ಮುಹಮ್ಮದ್ ಕೊಲೆಯತ್ನ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೊಳಗಾಗಿ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದು ಅದನ್ನು ಆತ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅದಿನ್ನೂ ಇತ್ಯರ್ಥವಾಗುವ ಮೊದಲೇ ಈ ಹೊತ್ತಿಗೆ ಲೋಕಸಭೆಯ ಕಚೇರಿಯು ಈ ಅನರ್ಹತೆಯನ್ನು ಕೊನೆಗೊಳಿಸಿ ಆತನನ್ನು ಪುನರ್‌ಸ್ಥಾಪಿಸಿದೆ. ಇದನ್ನು ಗಮನಿಸಿದರೆ ಪ್ರಾಯಃ ತನ್ನ ಹಿನ್ನಡೆಯ ಪರಿಣಾಮಗಳನ್ನು ಅರಿತಿರಬಹುದಾದ ಮೋದಿ ಸರಕಾರ ರಾಹುಲ್ ಮೇಲ್ಮನವಿಯ ತಡೆಯಾಜ್ಞೆಗೆ ಕಾದು ಕುಳಿತಿರಬಹುದು. ಈ ದಶಕದಲ್ಲಿ ಮೋದಿ ವರ್ಸಸ್ ಗಾಂಧಿ ವಿವಾದವು ಮಹಾತ್ಮಾಗಾಂಧಿಯನ್ನು ಗುರಿಯಾಗಿಸಿದರೂ ಅದೀಗ ರಾಹುಲ್ ಗಾಂಧಿಯ ಸುತ್ತ ಗಿರಕಿಹೊಡೆದಿರುವುದು ಮೋದಿಗೂ ಅನಿರೀಕ್ಷಿತ

Similar News