30 ದಿನಗಳಲ್ಲಿ 1,337 ಕೋ.ರೂ. ದಂಡ ಪಾವತಿಸಿ: ಗೂಗಲ್‌ಗೆ ಎನ್‌ಸಿಎಲ್‌ಎಟಿ ಸೂಚನೆ

Update: 2023-03-29 18:39 GMT

ಹೊಸದಿಲ್ಲಿ, ಮಾ. 29:  ನ್ಯಾಯಯುತ ವ್ಯಾಪಾರ ನಿಯಂತ್ರಕ ಭಾರತ ಸ್ಪರ್ಧಾ ಆಯೋಗ (ಸಿಸಿಐ) ವಿಧಿಸಿದ 1,337.76 ಕೋ.ರೂ.ವನ್ನು ಗೂಗಲ್ ಪಾವತಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಕಂಪೆನಿ ಕಾನೂನು  ಮೇಲ್ಮನವಿ ಪ್ರಾಧಿಕಾರ (ಎನ್‌ಸಿಎಲ್‌ಎಟಿ)ಬುಧವಾರ ಪ್ರತಿಪಾದಿಸಿದೆ.

ಎನ್‌ಸಿಎಲ್‌ಎಟಿಯ ಇಬ್ಬರು ಸದಸ್ಯರ ಪೀಠ ಸಿಸಿಐಯ ನಿರ್ದೇಶನವನ್ನು ಅನುಷ್ಠಾನಗೊಳಿಸುವಂತೆ ಹಾಗೂ ಮೊತ್ತವನ್ನು 30 ದಿನಗಳ ಒಳಗೆ ಠೇವಣಿ ಮಾಡುವಂತೆ ಗೂಗಲ್‌ಗೆ ಸೂಚಿಸಿದೆ. 

ಆ್ಯಂಡ್ರಾಯ್ಡ್ ಮೊಬೈಲ್‌ಗೆ ಸಂಬಂಧಿಸಿ ಸ್ಪರ್ಧಾತ್ಮಕ ವಿರೋಧಿ ಕ್ರಮ ಅನುಸರಿಸಿರುವುದಕ್ಕಾಗಿ ಗೂಗಲ್‌ಗೆ ಭಾರತದ ಸ್ಪರ್ಧಾ ಆಯೋಗ (ಸಿಸಿಐ) ಕಳೆದ ವರ್ಷ ಅಕ್ಟೋಬರ್ 20ರಂದು 1,337.76 ಕೋ. ರೂ. ದಂಡ ವಿಧಿಸಿತ್ತು. ಅಲ್ಲದೆ ನ್ಯಾಯೋಜಿತವಲ್ಲದ ವ್ಯವಹಾರ ಅಭ್ಯಾಸದಲ್ಲಿ ತೊಡಗಿಕೊಳ್ಳದಂತೆ ಗೂಗಲ್‌ಗೆ ಆದೇಶಿಸಿತ್ತು. 

ಈ ಆದೇಶವನ್ನು ಪ್ರಶ್ನಿಸಿ ಗೂಗಲ್ ರಾಷ್ಟ್ರೀಯ ಕಂಪೆನಿ ಕಾನೂನು  ಮೇಲ್ಮನವಿ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಎನ್‌ಸಿಎಲ್‌ಎಟಿ ಗೂಗಲ್ ಮನವಿಯನ್ನು ತಿರಸ್ಕರಿಸಿತು. ಅಲ್ಲದೆ, ಭಾರತದ ಸ್ಪರ್ಧಾ ಆಯೋಗ ನಡೆಸಿದ ತನಿಖೆ ವಾಸ್ತಾವದ ನ್ಯಾಯವನ್ನು ಉಲ್ಲಂಘಿಸಿಲ್ಲ ಎಂದು ಹೇಳಿತು. 

Similar News