ಎ. 1ರಿಂದ ಅಗತ್ಯ ಔಷಧಗಳ ಬೆಲೆ ಶೇ. 12ರಷ್ಟು ಏರಿಕೆ

Update: 2023-03-29 18:56 GMT

ಹೊಸದಿಲ್ಲಿ, ಮಾ. 29:  ಈಗಾಗಲೇ ಅವಶ್ಯಕ ವಸ್ತುಗಳ ಬೆಲೆಯಿಂದ ಹೈರಾಣಾಗಿರುವ ಜನತೆ ಇನ್ನು ಔಷಧಗಳ ಬೆಲೆ ಏರಿಕೆಯ ಆಘಾತ ಎದುರಿಸಲಿದ್ದಾರೆ. ಅಗತ್ಯದ ಔಷಧಗಳ ಬೆಲೆ ಎ. 1ರಿಂದ ಶೇ. 12.12ರಷ್ಟು ಏರಿಕೆಯಾಗಲಿದೆ. ಇದು ಔಷಧಗಳ ಬೆಲೆಯಲ್ಲಿ ದಾಖಲೆಯ ಅತ್ಯಧಿಕ ಹೆಚ್ಚಳವಾಗಿದೆ. 

ಶೆಡ್ಯೂಲ್ಡ್ ಔಷಧಗಳ ಬೆಲೆಯನ್ನು ಎ. 1ರಿಂದ ಶೇ. 12.12 ಏರಿಕೆ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ಸೋಮವಾರ ಅನುಮೋದನೆ ನೀಡಿದೆ. 

ಇದರಲ್ಲಿ ನೋವು ನಿವಾರಕ, ಆ್ಯಂಟಿ ಬಯೋಟಿಕ್, ಉರಿಯೂತ ನಿವಾರಕ ಔಷಧ, ಹೃದ್ರೋಗ ಔಷಧ ಸೇರಿದಂತೆ ರಾಷ್ಟ್ರೀಯ ಅಗತ್ಯದ ಔಷಧಗಳ ಪಟ್ಟಿಯ 800 ಔಷಧಗಳು ಒಳಗೊಳ್ಳಲಿವೆ. ಕಳೆದ ವರ್ಷ ಈ ಔಷಧಗಳ ಬೆಲೆಯನ್ನು ಶೇ. 10.76ರಷ್ಟು ಏರಿಕೆ ಮಾಡಲು  ಎನ್‌ಪಿಪಿಎ ಅನುಮತಿ ನೀಡಿತ್ತು. 

ಎನ್‌ಪಿಪಿಎ ಬೆಲೆ ನಿಯಂತ್ರಿಸುವ 800 ಔಷಧಗಳನ್ನು ಶೆಡ್ಯೂಲ್ಡ್ ಡ್ರಗ್ಸ್ ಎಂದು ವರ್ಗೀಕರಿಸಲಾಗುತ್ತದೆ. ನಾನ್ ಶೆಡ್ಯೂಲ್ಡ್ ಔಷಧಗಳ ಬೆಲೆಗಳು ಪ್ರಾಧಿಕಾರದ ನಿಯಂತ್ರಣದಲ್ಲಿ ಇರುವುದಿಲ್ಲ. ಅವುಗಳ ಬೆಲೆಯನ್ನು ವಾರ್ಷಿಕ ಗರಿಷ್ಠ ಶೇ. 10 ಹೆಚ್ಚಿಸಲು ಅವಕಾಶವಿದೆ. 

800 ಔಷಧಗಳನ್ನು ಹೊರತುಪಡಿಸಿ ಇನ್ನುಳಿದ ಔಷಧಗಳ ಬೆಲೆ ಏರಿಕೆಗೂ ರಾಷ್ಟ್ರೀಯ ಔಷಧ ಪ್ರಾಧಿಕಾರ ಅನುಮತಿ ನೀಡಿದೆ. ಇತರ ಔಷಧಗಳ ಬೆಲೆ ಶೇಕಡಾ 10ರಷ್ಟು ಏರಿಕೆ ಮಾಡಲು ಅನುಮತಿ ನೀಡಿದೆ. 

ಔಷಧಗಳ ಬೆಲೆ ವಿಪರೀತ ಏರಿಕೆಯ ಬಗ್ಗೆ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಬೇಕು ಎಂದು ಅಖಿಲ ಭಾರತ ಔಷಧ ಕ್ರಿಯಾ ಜಾಲದ ಸಹ ಸಂಚಾಲಕಿ ಮಾಲಿನಿ ಐಸೋಲಾ ಅವರು ತಿಳಿಸಿದ್ದಾರೆ. 

ಈ ರೀತಿ ಮತ್ತೆ ಮತ್ತೆ ಬೆಲೆ ಏರಿಕೆಯು ಅಗತ್ಯ ಔಷಧಗಳ ಬೆಲೆ ನಿಗದಿಯ ಉದ್ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. 

Similar News