ಮೊಸರಿನ ಪ್ಯಾಕೆಟ್‌ ನಲ್ಲಿ ʼದಹಿʼ ಬರಹ: ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ

Update: 2023-03-30 09:48 GMT

ಚೆನ್ನೈ: ಮೊಸರು ಪೊಟ್ಟಣಗಳ ಮೇಲೆ ಹಿಂದಿಯಲ್ಲಿ 'ದಹಿ' ಎಂದು ಮರುನಾಮಕರಣ ಮಾಡಬೇಕು ಎಂಬ ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ ನೀಡಿರುವ ನಿರ್ದೇಶನದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ‌.ಸ್ಟಾಲಿನ್ ಹಾಗೂ ರಾಜ್ಯದ ಹಾಲು ಉತ್ಪಾದಕರು ತಿರುಗಿ ಬಿದ್ದಿದ್ದು, ಈ ಕ್ರಮವು ಹಿಂದಿ ಮಾತನಾಡದ ರಾಜ್ಯಗಳ ಮೇಲೆ ಹಿಂದಿ ಹೇರುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಪ್ರಾಧಿಕಾರವು ತಮಿಳುನಾಡು ಹಾಲು ಉತ್ಪಾದಕರ ಒಕ್ಕೂಟಕ್ಕೆ ತಮ್ಮ ಮೊಸರು ಪೊಟ್ಟಣಗಳ ಮೇಲೆ ಇಂಗ್ಲಿಷ್‌ನಲ್ಲಿ Curd ಹಾಗೂ ತಮಿಳಿನಲ್ಲಿ ತೈರ್ ಎಂದು ನಮೂದಿಸುವ ಬದಲು ಹಿಂದಿಯಲ್ಲಿ 'ದಹಿ' ಎಂದು ನಮೂದಿಸಬೇಕು ಎಂದು ನಿರ್ದೇಶಿಸಿತ್ತು. ಈ ನಿರ್ದೇಶನವು ಬೆಣ್ಣೆ ಹಾಗೂ ಚೀಸ್‌ಗೂ ಅನ್ವಯವಾಗಿತ್ತು.

ಈ ನಿರ್ದೇಶನಕ್ಕೆ ತಮಿಳುನಾಡು ಹಾಗೂ ನೆರೆ ರಾಜ್ಯವಾದ ಕರ್ನಾಟಕದಲ್ಲಿನ ಹಾಲು ಉತ್ಪಾದಕರಿಂದ ವಿರೋಧ ವ್ಯಕ್ತವಾಗಿದ್ದು, ನಾವು ನಮ್ಮ ಪ್ರಾದೇಶಿಕ ಭಾಷೆಯನ್ನು ಬಳಸಲು ಅವಕಾಶ ನೀಡಬೇಕು ಎಂದು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಮೊಸರು ಎಂಬುದು ಯಾವುದೇ ಭಾಷೆಯಲ್ಲಿ ಬಳಸುವ ಮೂಲ ಹೆಸರಾಗಿದ್ದರೆ, 'ದಹಿ' ಒಂದು ನಿರ್ದಿಷ್ಟ ಉತ್ಪನ್ನವಾಗಿದ್ದು, ರುಚಿ ಹಾಗೂ ಬಣ್ಣದಲ್ಲಿ ವಿಭಿನ್ನವಾಗಿರುತ್ತದೆ ಎಂದು ವಾದಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಪ್ರಾಧಿಕಾರದ ನಿರ್ದೇಶನವನ್ನು ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಇಂದು ಹಿಂದಿ ಹೇರಿಕೆಯ ಪ್ರಕರಣವಾಗಿದ್ದು, ಇಂತಹ ಕ್ರಮವು ದಕ್ಷಿಣ ಭಾರತವನ್ನು ಪ್ರತ್ಯೇಕಿಸಲಿದೆ ಎಂದು ಎಚ್ಚರಿಸಿದ್ದಾರೆ.  ಈ ಕುರಿತು ಟ್ವೀಟ್ ಮಾಡಿರುವ ಅವರು, "ಹಿಂದಿ ಹೇರಿಕೆಯ ಲಜ್ಜೆಗೆಟ್ಟ ಕ್ರಮವು ಮೊಸರು ಪೊಟ್ಟಣಗಳನ್ನೂ ಹಿಂದಿಯಲ್ಲಿ ನಮೂದಿಸುವಂತೆ ನಿರ್ದೇಶಿಸುವ ಮಟ್ಟ ತಲುಪಿದೆ. ಇದರಿಂದ ನಮ್ಮ ರಾಜ್ಯಗಳಾದ ಕರ್ನಾಟಕ, ತಮಿಳುನಾಡನ್ನು ತುಚ್ಛೀಕರಿಸಿದಂತಾಗಿದೆ. ನಮ್ಮ ಮಾತೃಭಾಷೆಗಳಿಗೆ ತೋರುವ ಇಂತಹ ಲಜ್ಜೆಗೆಟ್ಟ ಅಗೌರವವು ಇದಕ್ಕೆ ಹೊಣೆಗಾರರಾಗಿರುವವರನ್ನು ದಕ್ಷಿಣ ಭಾರತದಿಂದ ಶಾಶ್ವತವಾಗಿ ಬಹಿಷ್ಕರಿಸುವುದು ನಿಶ್ಚಿತ" ಎಂದು ಕಿಡಿ ಕಾರಿದ್ದಾರೆ.

ಎಂ‌.ಕೆ‌.ಸ್ಟಾಲಿನ್ ಅವರ ಹೇಳಿಕೆಯನ್ನೇ ಕೇಂದ್ರದಲ್ಲಿ ಅಧಿಕಾರಾರೂಢವಾಗಿರುವ ಬಿಜೆಪಿ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೂಡಾ ಪುನರುಚ್ಚರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ನೀತಿಗೆ ಅನುಗುಣವಾಗಿ ಈ ನಿರ್ದೇಶನ ಇಲ್ಲವಾಗಿರುವುದರಿಂದ ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇದಲ್ಲದೆ ನೂತನ ಶಿಕ್ಷಣ ನೀತಿಯ ಭಾಗವಾಗಿ ತ್ರಿಭಾಷಾ ಸೂತ್ರವನ್ನು ಅಳವಡಿಸಿರುವುದನ್ನೂ ತಮಿಳುನಾಡು ರಾಜ್ಯ ತೀವ್ರವಾಗಿ ವಿರೋಧಿಸುತ್ತಿದ್ದು, ಈ ನೀತಿಯನ್ವಯ ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಮೂರನೆ ಭಾಷೆಯನ್ನಾಗಿ ಕಲಿಯಬೇಕಿದೆ.

Similar News