ಕರಾವಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಕೊಡಲು ಸಾಧ್ಯವಾಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2023-03-30 12:04 GMT

ಉಡುಪಿ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆಗೆ ಒಂದು ಲಕ್ಷ ಕ್ವಿಂಟಾಲ್ ಭತ್ತದ ಅವಶ್ಯಕತೆ ಇದ್ದು, ಭತ್ತದ ಖರೀದಿ ಕೇಂದ್ರಕ್ಕೆ ರೈತರಿಂದ ಭತ್ತ ಕಡಿಮೆ ಹರಿದು ಬಂತು. ನಮ್ಮ ಊಹೆಯ ಪ್ರಮಾಣದಲ್ಲಿ ಭತ್ತ ಸಂಗ್ರಹ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷ ಕುಚ್ಚಲಕ್ಕಿ ಕೊಡಲು ಸಾಧ್ಯವಾಗಿಲ್ಲ. ಕುಚ್ಚಲಕ್ಕಿ ಕೊಡುತ್ತೇವೆ ಎಂಬುದು ಹೇಳಿರುವುದು ಕೇವಲ ಪ್ರಚಾರಕ್ಕಾಗಿ ಅಲ್ಲ. ಕೊಡುವ ಪ್ರಯತ್ನ ಮುಂದುವರೆಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಪ್ರಸ್ತುತ ಶಾಸಕರನ್ನು ಮತ್ತು ಆಕಾಂಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆಯ ತೀರ್ಮಾನ ಮಾಡಲಾಗುತ್ತದೆ. ಈಗಾಗಲೇ ಕೇಂದ್ರದ ನಾಯಕ ರಿಂದ ನಡೆಸಿರುವ ಸಮೀಕ್ಷೆಗಳು ನಡೆದಿವೆ. ಈ ವೇಳೆ ಕಾರ್ಯಕರ್ತರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಎರಡು ದಿನಗಳ ಕಾಲ ಪ್ರತಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಪಕ್ಷ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಆರ್‌ಎಸ್‌ಎಸ್ ಎಂದೂ ಕೂಡ ಸಕ್ರಿಯವಾಗಿ ರಾಜಕೀಯ ಮಾಡಿಲ್ಲ. ಆರೆಸ್ಸೆಸ್ ಸಲಹೆ ಸೂಚನೆಗಳನ್ನು ಕೊಡುವುದು ತಪ್ಪಲ್ಲ. ಪಕ್ಷ ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡು ಟಿಕೆಟ್ ಹಂಚಿಕೆ ಮಾಡಲಿದೆ. ಚುನಾವಣೆಯ ಸಂದರ್ಭದಲ್ಲಿ ಪಕ್ಷದಲ್ಲಿ ಚರ್ಚೆ ಭಿನ್ನಾಭಿಪ್ರಾಯ, ಗುಡುಗು-ಸಿಡಿಲು ಸಾಮಾನ್ಯವಾಗಿರುತ್ತದೆ ಎಂದು ಅವರು ಹೇಳಿದರು.

ಬಂಟ ಸಮುದಾಯ ನಿಗಮಕ್ಕೆ ಒತ್ತಾಯಿಸುತ್ತಿರುವುದರ ಕುರಿತ ಪ್ರಶ್ನೆಗೆ, ಬಂಟರು ಬಿಜೆಪಿ ಮತ್ತು ರಾಷ್ಟ್ರೀಯತೆಯನ್ನು ಬೆಂಬಲಿಸುತ್ತ ಬರುತ್ತಿದ್ದಾರೆ. ಅವರ ಭಾವನೆ ಗೌರವಿಸುವುದು ನಮ್ಮ ಧರ್ಮವಾಗಿದೆ. ಅವರ ಬೇಡಿಕೆಯನ್ನು ಪರಿಶೀಲನೆ ಮಾಡಲಾಗುವುದು ಎಂದರು. 

ಉರಿ ಗೌಡ, ನಂಜೇಗೌಡ ಟಿಪ್ಪುವನ್ನು ಕೊಂದಿದ್ದಾರೆಂಬ ಗೊಂದಲ ವಿಚಾರ ಕುರಿತು, ಒಕ್ಕಲಿಗ ಸಮುದಾಯದ ಪರಮ ಪೂಜ್ಯ ಸ್ವಾಮೀಜಿಗಳು ಎಲ್ಲರನ್ನು ಕರೆದು ಮಾತುಕತೆ ಮಾಡಿದ್ದಾರೆ. ಸಿನಿಮಾ ಮಾಡಬಾರದು ಎಂದು ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿಯವರ ಅಂತಿಮ ತೀರ್ಮಾನವನ್ನು ನಾವು ಒಪ್ಪಿಕೊಂಡಿ ದ್ದೇವೆ ಎಂದು ತಿಳಿಸಿದರು.

ಅನಾಥ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೀಡಿದ ವರದಿಯನ್ನು ಸರಕಾರ ಅಂಗೀಕಾರ ಮಾಡಿದೆ. ಮುಂದಿನ ದಿನಗಳಲ್ಲಿ ಸರಕಾರ ಇದನ್ನು ಅನುಷ್ಠಾನ ಮಾಡಲಿದೆ ಎಂದು ಅವರು ತಿಳಿಸಿದರು. 

ನಂದಿನಿ ಮೊಸರು ಪ್ಯಾಕೆಟ್ ಮೇಲೆ ದಹೀ ಎಂದು ಬರೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಭಾಷೆಗೆ ಪ್ರಾಧಾನ್ಯತೆ ಕೊಡಬೇಕು ಎಂಬುದು ಪ್ರಧಾನಿ ಮತ್ತು ಕೇಂದ್ರ ಸರಕಾರದ ಸ್ಪಷ್ಟ ನಿಲುವು ಆಗಿದೆ. ಆಯಾ ರಾಜ್ಯದ ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ಕೊಡುತ್ತೇವೆ. ಅದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

ಯಾವುದೇ ಸಂಘಟನೆ, ಯಾರೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಬಹುದು. ಚುನಾವಣೆ ಸ್ಪರ್ಧಿಸುವ ನಿರ್ಧಾರ ಮಾಡಿದರೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಪ್ರಮೋದ್ ಮುತಾಲಿಕ್ ಅವರ ಮೇಲೆ ನಮಗೆ ಗೌರವ ಇದೆ. ಆದರೆ ಕಾರ್ಕಳದಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತದೆ ಎಂದು ತಿಳಿಸಿದರು.

ಸಮೀಕ್ಷೆಗೆ ಮೀರಿದ ಜನಾದೇಶ

ವಿಧಾನಸಭಾ ಚುನಾವಣೆಗೆ ಸರ್ವ ಸಿದ್ಧತೆಗಳನ್ನು ಮಾಡಿ ಕೊಂಡಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಬಿಜೆಪಿ ಪರ ನಿಲ್ಲಲಿವೆ. ಪೂರ್ವ ಸಮೀಕ್ಷೆಗಳು ಕೇವಲ ಒಂದು ಸಮೀಕ್ಷೆ ಮಾತ್ರ. ಆ ಸಮೀಕ್ಷೆಯನ್ನು ಮೀರಿ ಬಿಜೆಪಿಗೆ ಸ್ಪಷ್ಟವಾದ ಜನಾದೇಶ ಬರಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. 

ದೇವರಾಜ ಅರಸು ನಂತರ ಬಿಜೆಪಿ ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿ ಎಲ್ಲ ಸಮುದಾಯಕ್ಕೂ ಸಿಹಿ ಹಂಚಿದೆ. ಧರ್ಮದ ಆಧಾರದಲ್ಲಿನ ಮೀಸಲಾತಿ ಸ್ಪಷ್ಟವಾಗಿ ಇರಲಿಲ್ಲ. ಅಲ್ಪಸಂಖ್ಯಾತರ ಮೀಸಲಾತಿಯನ್ನು ತೆಗೆದಿಲ್ಲ. ಅಲ್ಪ ಸಂಖ್ಯಾತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗಿಲ್ಲ ಎಂದರು.

Similar News