ಜಲಗಾಂವ್ : ಧಾರ್ಮಿಕ ಮೆರವಣಿಗೆ ವೇಳೆ ಗುಂಪು ಘರ್ಷಣೆ

Update: 2023-03-30 16:15 GMT

ಜಲಗಾಂವ್, ಮಾ.30: ಮಸೀದಿಯೊಂದರಲ್ಲಿ ನಮಾಝ್ ನಡೆಯುತ್ತಿದ್ದಾಗ, ಪಕ್ಕದ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಧಾರ್ಮಿಕ ಮೆರವಣಿಗೆಯಲ್ಲಿ ಧ್ವನಿವರ್ಧಕಗಳಿಂದ ಹಾಡುಗಳನ್ನು ನುಡಿಸಿದ್ದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಘರ್ಷಣೆ ತಿರುಗಿದ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಾಲ್ದಿ ಪಟ್ಟಣಲ್ಲಿ ಗುರುವಾರ ನಡೆದಿದೆ. ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರಿಗೆ ಗಾಯಗಳಾಗಿವೆಯೆಂದು ಎಂದು ಜಲಗಾಂವ್ ಪೊಲೀಸ್ ಅಧೀಕ್ಷಕ ಎಂ. ರಾಜಕುಮಾರ್ ತಿಳಿಸಿದ್ದಾರೆ.

ಗಲಭೆಯಲ್ಲಿ ಶಾಮೀಲು ಹಾಗೂ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಗಳಿಗೆ ಸಂಬಂಧಿಸಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಹಾಗೂ 45 ಮಂದಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಧಾರ್ಮಿಕ ಮೆರವಣಿಗೆಯೊಂದು ಜಲಗಾಂವ್‌ನಿಂದ ನಾಸಿಕ್ ಜಿಲ್ಲೆಯ ವಾನಿಗೆ ತೆರಳುತ್ತಿದ್ದಾಗ, ಮಾರ್ಗಮದ್ಯದಲ್ಲಿರುವ ಪಾಲ್ದಿ ಪಟ್ಟಣದಲ್ಲಿ ಹಿಂಸಾಚಾರ ಸಂಭವಿಸಿದೆ. ಮೆರವಣಿಗೆಯು ಮಸೀದಿಯೊಂದರ ಸಮೀಪ ಹಾದುಹೋಗುವಾಗ ಧ್ವನಿವರ್ಧಕದಿಂದ ಸಂಗೀತವನ್ನು ಗಟ್ಟಿಯಾಗಿ ನುಡಿಸಿದ್ದಕಾಗಿ ಎರಡು ಸಮುದಾಯಗಳ ಗುಂಪುಗಳ ನಡುವೆ ವಾಗ್ವಾದವುಂಟಾಗಿತ್ತು. ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿತ್ತು ಹಾಗೂ ಕಲ್ಲುತೂರಾಟ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು 8 ಹಿಂದೂಗಳು ಹಾಗೂ 63 ಮುಸ್ಲಿಮರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದವರು ತಿಳಿಸಿದ್ದಾರೆ. ಈ ಮಧ್ಯೆ ಹಿಂಸಾಚಾರದ ಸಂದರ್ಭ ಮುಸ್ಲಿಂ ಸಮುದಾಯದವರ ಮನೆಗಳನ್ನು ಲೂಟಿ ಮಾಡಲಾಗಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಪೊಲೀಸರು ಅದನ್ನು ನಿರಾಕರಿಸಿದ್ದಾರೆ.

ಜಲಗಾಂವ್‌ನಲ್ಲಿ ಸಂಘಪರಿವಾರದ ಗುಂಪುಗಳು ಕಳೆದ ಕೆಲವು ತಿಂಗಳುಗಳಲ್ಲಿ ಜಲಗಾಂವ್ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ನಡೆಸಿದ ರ್ಯಾಲಿಗಳಲ್ಲಿ ಮುಸ್ಲಿಮರ ವಿರುದ್ದ ದ್ವೇಷಭಾಷಣಗಳನ್ನು ಮಾಡಲಾಗಿತ್ತು.

Similar News