ರಾಮ ನವಮಿಯ ನಂತರ ಮತ್ತೆ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾದ ಹೌರಾ

Update: 2023-03-31 12:38 GMT

ಹೊಸದಿಲ್ಲಿ: ಗುರುವಾರ ರಾಮ ನವಮಿ ಮೆರವಣಿಗೆ ವೇಳೆ ಕೋಮು ಸಂಘರ್ಷಗಳಿಗೆ ಸಾಕ್ಷಿಯಾದ ಪಶ್ಚಿಮ ಬಂಗಾಳದ ಹೌರಾದಲ್ಲಿ ಶುಕ್ರವಾರ ಮತ್ತೆ  ಹಿಂಸೆಯ ಪ್ರಕರಣಗಳು ವರದಿಯಾಗಿವೆ. ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ಗುಂಪುಗಳು ಕಲ್ಲು ತೂರಾಟದಲ್ಲಿ ತೊಡಗಿರುವುದು ಹಾಗೂ ಮಾಧ್ಯಮ ಮಂದಿಯ ವಿರುದ್ಧವೂ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಕೂಡ ಪ್ರಯೋಗಿಸಿದ್ದಾರೆ.

ಗುರುವಾರ ಹಿಂಸೆ ನಡೆದ ಪ್ರದೇಶದ ರಸ್ತೆಯನ್ನು ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸಿದ ಬೆನ್ನಿಗೇ ಶಿಬ್‌ಪುರ್‌ ಎಂಬಲ್ಲಿ ಮತ್ತೆ ಹಿಂಸೆಯ ಘಟನೆಗಳು ನಡೆದಿವೆ.

ನಿನ್ನೆಯ ಹಿಂಸಾಚಾರದಲ್ಲಿ ಪೊಲೀಸ್‌ ವಾಹನಗಳು ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಲವಾರು ಅಂಗಡಿಗಳಲ್ಲೂ ಉದ್ರಿಕ್ತರು ದಾಂಧಲೆ ನಡೆಸಿದ್ದರು.

ಘಟನೆ ಸಂಬಂಧ ಕನಿಷ್ಠ 36 ಮಂದಿಯನ್ನು ಬಂಧಿಸಲಾಗಿದೆ. ನಿರ್ದಿಷ್ಟ ಹಾದಿಯಲ್ಲಿ ಮೆರವಣಿಗೆ ಸಾಗದೆ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಬೇರೆ ಹಾದಿಯಲ್ಲಿ ಸಾಗಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ರಾಜ್ಯದ ಹೊರಗಿನಿಂದ ಗೂಂಡಾಗಳನ್ನು  ತರಿಸಿ ಬಿಜೆಪಿ ಹಿಂಸೆಯನ್ನು ಸೃಷ್ಟಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಆದರೆ ತೃಣಮೂಲ ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. "ಹೌರಾ ಮೈದಾನದ ತನಕ ಹೋಗಲು ಅನುಮತಿಯಿತ್ತು. ಅಲ್ಲಿಗೆ ಹೋಗಲು ಇದೊಂದೇ ದಾರಿಯಾಗಿತ್ತು," ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಂತ ಮಜುಂದಾರ್‌ ಹೇಳಿದ್ದಾರೆ.

Similar News