ನನ್ನನ್ನು ಭ್ರಷ್ಟನೆಂದು ಕರೆದರೆ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ: ಕೇಜ್ರಿವಾಲ್‌ ಗೆ ಹಿಮಂತ ಬಿಸ್ವಾ ಶರ್ಮ ಎಚ್ಚರಿಕೆ

Update: 2023-03-31 12:41 GMT

ಗುವಾಹಟಿ: ʼನನ್ನನ್ನು ಭ್ರಷ್ಟನೆಂದು ಕರೆಯಿರಿʼ ಎಂದು ರವಿವಾರ ಗುವಾಹಟಿಗೆ ಭೇಟಿ ನೀಡಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಸವಾಲೆಸೆದಿದ್ದಾರೆ. ದಿಲ್ಲಿ ಮುಖ್ಯಮಂತ್ರಿಯ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ತಮ್ಮ ವಿರುದ್ಧ ಯಾವುದೇ ಬಾಕಿ ಪ್ರಕರಣ ಯಾವುದೇ ನ್ಯಾಯಾಲಯ ಅಥವಾ ಏಜನ್ಸಿ ಮುಂದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಪುನರುಚ್ಛರಿಸಿದ್ದಾರೆ.

"ನನ್ನ ವಿರುದ್ಧ ಯಾವ ಪ್ರಕರಣವಿದೆ? ನನ್ನ ವಿರುದ್ಧ ಇರುವ ಒಂದಾದರೂ ಪ್ರಕರಣವನ್ನು ತೋರಿಸುವಂತೆ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸವಾಲೆಸೆಯುತ್ತೇನೆ," ಎಂದು ಅವರು ಹೇಳಿದರು.

ಈ ಹಿಂದೆ ಕೇಜ್ರಿವಾಲ್‌ ಅವರು ತಮ್ಮನ್ನು ಭ್ರಷ್ಟ ಮನುಷ್ಯ ಎಂದು ಹೇಳಿದಾಗ ತಾವು ಮಾನನಷ್ಟ ಪ್ರಕರಣ ದಾಖಲಿಸಲು ಬಯಸಿದ್ದಾಗಿ ಹೇಳಿದ ಶರ್ಮ, ಆದರೆ ಆ ಸಮಯ ಕೇಜ್ರಿವಾಲ್‌ ಅವರು ದಿಲ್ಲಿ ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಮಾತನಾಡಿದ್ದರಿಂದ ಪ್ರಕರಣ ದಾಖಲಿಸಲು ಸಾಧ್ಯವಾಗಲಿಲ್ಲ  ಎಂದು ಅವರು ಹೇಳಿದ್ದಾರೆ.

"ನನಗೆ ಮಾನನಷ್ಟ ಪ್ರಕರಣ ದಾಖಲಿಸಬೇಕಿತ್ತು. ಆದರೆ ಕೇಜ್ರಿವಾಲ್‌ ಓರ್ವ ಹೇಡಿ, ಅವರು ದಿಲ್ಲಿ ವಿಧಾನಸಭೆಯಲ್ಲಿ ನನ್ನ ವಿರುದ್ಧ ಮಾತನಾಡಿದರು. ಆದರೆ ತಮ್ಮ ನಿಗದಿತ ಅಸ್ಸಾಂ ಪ್ರವಾಸದ ವೇಳೆ ನನ್ನನ್ನು ಭ್ರಷ್ಟ ಎಂದು ಅವರು ಕರೆಯಲಿ ಎಂದು ಸವಾಲೆಸೆಯುತ್ತೇನೆ. ಸಿಸೋಡಿಯಾ ವಿರುದ್ಧ ಮಾಡಿದಂತೆ ಅವರ ವಿರುದ್ಧವೂ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ," ಎಂದು ಸರ್ಮ ಹೇಳಿದರು.

ಅಸ್ಸಾಂನಲ್ಲಿ ಆಮ್‌ ಆದ್ಮಿ ಪಕ್ಷದ ಬಲವರ್ಧನೆಯ ಉದ್ದೇಶದಿಂದ ಕೇಜ್ರಿವಾಲ್‌ ಮತ್ತು ಪಂಜಾಬ್‌ ಸೀಎಂ ಭಗವಂತ್‌ ಮನ್ನ್‌ ನಾಳೆ ಅಸ್ಸಾಂಗೆ ಭೇಟಿ ನೀಡಲಿದ್ದಾರೆ.

Similar News