ಅಬಕಾರಿ ನೀತಿ ಪ್ರಕರಣ: ‌ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾ

Update: 2023-03-31 15:16 GMT

ಹೊಸದಿಲ್ಲಿ, ಮಾ. 31: ದಿಲ್ಲಿಯ ನೂತನ ಮದ್ಯ ನೀತಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಶುಕ್ರವಾರ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಕಳೆದ ವಾರ ವಿಶೇಷ ನ್ಯಾಯಾಧೀಶ ಎಮ್.ಕೆ. ನಾಗ್ಪಾಲ್ ಜಾಮೀನು ಕುರಿತ ತೀರ್ಪನ್ನು ಕಾದಿರಿಸಿದ್ದರು. ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯವು ನೀಡಿರುವ ಸೂಚನೆಯಂತೆ, ಸಿಬಿಐ ವಕೀಲರು, ಲಿಖಿತ ವಾದಗಳು ಮತ್ತು ಸಂಬಂಧಪಟ್ಟ ಇತರ ತೀರ್ಪುಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಧೀಶರು ಈ ಕ್ರಮ ತೆಗೆದುಕೊಂಡಿದ್ದರು. ಅಂದು ಸಿಬಿಐಯು ಒಂದು ಕೇಸ್ ಡೈರಿ ಮತ್ತು ಪ್ರಕರಣದ ಹಲವಾರು ಸಾಕ್ಷಿಗಳ ಹೇಳಿಕೆಗಳನ್ನೂ ಸಲ್ಲಿಸಿತ್ತು.

ಅದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಸಿಬಿಐ ಈಗಾಗಲೇ ವಶಪಡಿಸಿಕೊಂಡಿರುವುದರಿಂದ ನನ್ನನ್ನು ಕಸ್ಟಡಿಯಲ್ಲಿ ಇರಿಸುವುದರಿಂದ ಯಾವುದೇ ಉದ್ದೇಶ ಸಾಧನೆಯಾಗುವುದಿಲ್ಲ ಎಂದು ತನ್ನ ಜಾಮೀನು ಅರ್ಜಿಯಲ್ಲಿ ಸಿಸೋಡಿಯ ಮನವಿ ಮಾಡಿದ್ದರು. ಪ್ರಕರಣದ ಇತರ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎನ್ನುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು ಹಾಗೂ ಸಿಬಿಐ ಕರೆದಾಗಲೆಲ್ಲ ನಾನು ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಹೇಳಿದ್ದರು.

‘‘ಅವರಿಗೆ ಜಾಮೀನು ನೀಡಿದರೆ ಅದು ನಮ್ಮ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ, ಯಾಕೆಂದರೆ ಅವರಿಗೆ ಅಷ್ಟು ಪ್ರಭಾವವಿದೆ’’ ಎಂದು ಸಿಬಿಐ ವಕೀಲ ಡಿ.ಪಿ. ಸಿಂಗ್ ವಾದಿಸಿದ್ದರು. ಈಗ ರದ್ದಾಗಿರುವ ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯವು ಸಿಸೋಡಿಯರನ್ನು ಬಂಧಿಸಿವೆ. ಅವರು ಈಗ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾರೆ.

Similar News