ಉತ್ತರಪ್ರದೇಶ: ಮನೆಯೊಂದರಲ್ಲಿ ಭಾರೀ ಸ್ಫೋಟ; ನಾಲ್ವರು ಸಾವು

Update: 2023-03-31 15:38 GMT

ಲಕ್ನೋ, ಮಾ. 31: ಉತ್ತರಪ್ರದೇಶದ ಬುಲಂದ್ಶಹರ್ ಹೊಲದ ಮಧ್ಯದಲ್ಲಿರುವ ಮನೆಯೊಂದರಲ್ಲಿ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು, ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಯಲ್ಲಿ ಮೃತಪಟ್ಟವರನ್ನು ಅಭಿಷೇಕ್ (20), ರಯೀಸ್ (40), ಅಹದ್ (05) ಹಾಗೂ ವಿನೋದ್ ಎಂದು ಗುರುತಿಸಲಾಗಿದೆ. ಸ್ಫೋಟ ಸಂಭವಿಸಿದ ಮನೆಯಲ್ಲಿ ಇವರು ಬಾಡಿಗೆಗೆ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಟ್ವಾಲಿ ನಗರ್ ಪ್ರದೇಶದ ನಯಾಗಾಂವ್ನ ಹೊಲದ ಮಧ್ಯದಲ್ಲಿ ನಿರ್ಮಿಸಲಾದ ಮನೆಯಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ಶುಕ್ರವಾರ ಮಧ್ಯಾಹ್ನ ಕರೆ ಸ್ವೀಕರಿಸಿದೆವು. ಕೂಡಲೇ ಅಗ್ನಿಶಾಮಕ ದಳ ಹಾಗೂ ಸಿಎಂ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿತು ಎಂದು ಎಸ್ಎಸ್ಪಿ ಶ್ಲೋಕ್ ಕುಮಾರ್ ಅವರು ಹೇಳಿದ್ದಾರೆ. 

ಘಟನಾ ಸ್ಥಳದಲ್ಲಿ ಕೆಲವು ಸಿಲಿಂಡರ್ ಹಾಗೂ ಡ್ರಮ್ ಗಳು ಪತ್ತೆಯಾಗಿವೆ. ಪುರಾವೆಗಳನ್ನು ಸಂಗ್ರಹಿಸಲು ವಿಧಿ ವಿಜ್ಞಾನ ತಂಡಕ್ಕೆ ಕರೆ ನೀಡಲಾಗಿದೆ. ಸ್ಫೋಟದ ಹಿಂದಿನ ನಿಖರ ಕಾರಣಗಳನ್ನು ತಿಳಿಯಲು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್ ಸಿಂಗ್ ಹೇಳಿದ್ದಾರೆ.

Similar News