ಉಕ್ರೇನ್ ಯುದ್ಧದಲ್ಲಿ ದಿನನಿತ್ಯ ಮಾನವ ಹಕ್ಕುಗಳ ಉಲ್ಲಂಘನೆ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಕಳವಳ

Update: 2023-03-31 15:49 GMT

ಜಿನೆವಾ,  ಮಾ.31: ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ  ಮಾನವಹಕ್ಕುಗಳ ಉಲ್ಲಂಘನೆಯು ದೈನಂದಿನ ಕಾರ್ಯಕ್ರಮದಂತೆ ನಡೆಯುತ್ತಿದೆ  ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್ ವೋಕರ್ ಟರ್ಕ್(Volker Turk) ಕಳವಳ ವ್ಯಕ್ತಪಡಿಸಿದ್ದು ನಾಗರಿಕರ ಸಾವುನೋವಿನ ಪ್ರಮಾಣ ಅಧಿಕೃತ ಅಂಕಿ ಅಂಶಗಳಿಗಿಂತ ತುಂಬಾ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಜಿನೆವಾದಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಶ್ಯದ ಆಕ್ರಮಣದ ಎದುರು ಉಕ್ರೇನ್ ತನ್ನ ಅಸ್ತಿತ್ವಕ್ಕಾಗಿ ಹೆಣಗುತ್ತಿರುವ ದೇಶವಾಗಿದೆ. 13 ತಿಂಗಳಿಂದ ಮುಂದುವರಿದಿರುವ  ಉಕ್ರೇನ್ ವಿರುದ್ಧದ ರಶ್ಯದ ಯುದ್ಧದಲ್ಲಿ ಮಾನವ ಹಕ್ಕುಗಳ ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆ ಆಘಾತಕಾರಿ ರೀತಿಯಲ್ಲಿ ವಾಡಿಕೆಯಾಗುತ್ತಿದೆ. ದೇಶದಾದ್ಯಂತ ಜನತೆ ಭಾರೀ ಸಂಕಟ, ನಷ್ಟ, ಸ್ಥಳಾಂತರ ಮತ್ತು ವಿನಾಶವನ್ನು ಎದುರಿಸುತ್ತಿದ್ದಾರೆ  ಎಂದರು.

ಪೂರ್ವ ಮತ್ತು ದಕ್ಷಿಣ ಉಕ್ರೇನ್ ನ ಕೆಲವು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿರುವ ರಶ್ಯದ ಪಡೆ ಅಲ್ಲಿ ದೌರ್ಜನ್ಯ ಎಸಗುತ್ತಿದೆ ಎಂದು ಉಕ್ರೇನ್ ಹಾಗೂ ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ. ಆದರೆ ರಶ್ಯ ಇದನ್ನು ನಿರಾಕರಿಸಿದೆ. ಉಕ್ರೇನ್ ನಲ್ಲಿನ ಯುದ್ಧದಲ್ಲಿ 8,400ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದು 14,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಹೈಕಮಿಷನರ್ ರ ಕಚೇರಿ (OHCHR)ಯ ವರದಿ ಹೇಳಿದೆ.

ಈ ಅಂಕಿಅಂಶ ಸಮಸ್ಯೆಯ ಒಂದು ಕಿರುನೋಟವಷ್ಟೇ ಆಗಿದೆ. ರಶ್ಯವು ನೆರೆಹೊರೆಯ ವಸತಿ ಪ್ರದೇಶಗಳಲ್ಲಿ ವ್ಯಾಪಕ ಪ್ರಭಾವದ ಸ್ಫೋಟಕಗಳನ್ನು ಬಳಸಿರುವುದು ಬಹುತೇಕ ಸಾವುನೋವಿಗೆ ಕಾರಣವಾಗಿದೆ ಎಂದು ಟರ್ಕ್ ಹೇಳಿದ್ದಾರೆ. ಉಕ್ರೇನ್ ನಲ್ಲಿ ಸಂಭಾವ್ಯ ದೌರ್ಜನ್ಯ ಪ್ರಕರಣಗಳ ತನಿಖೆಗೆ ವಿಶ್ವಸಂಸ್ಥೆಯ ತನಿಖಾ ಆಯೋಗ ರಚಿಸುವ ಬಗ್ಗೆ ಮುಂದಿನ ವಾರ ನಡೆಯುವ ಮಾನವಹಕ್ಕುಗಳ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ.

Similar News