ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವೆ: ಅಮೃತಪಾಲ್ ವಿಡಿಯೋ ಸಂದೇಶ

Update: 2023-03-31 17:03 GMT

ಹೊಸದಿಲ್ಲಿ,ಮಾ.31: ತಲೆಮರೆಸಿಕೊಂಡಿರುವ ಖಾಲಿಸ್ತಾನ ಬೆಂಬಲಿಗ ಸಿಖ್ಖ್ ಧಾರ್ಮಿಕ ನಾಯಕ ಅಮೃತಪಾಲ್ ಸಿಂಗ್(Amritpal Singh) ಗುರುವಾರ ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲೇ ತಾನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾನೆ.

‘‘ನಾನು ಪಲಾಯನಗೈದಿಲ್ಲ. ಆದರೆ ಬಂಡಾಯಗಾರ’’ ಎಂದು ಅಮೃತಪಾಲ್ ಸಿಂಗ್ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ‘‘ನಾನು ನನ್ನ ಸಮುದಾಯ ಹಾಗೂ ಬೆಂಬಲಿಗರ ಜೊತೆಗಿದ್ದೇನೆ. ದೇಶದಿಂದ ನಾನು ಪರಾರಿಯಾಗಿಲ್ಲ. ನನಗೆ ಸರಕಾರದ ಬಗ್ಗೆ ಹೆದರಿಕೆಯಿಲ್ಲ. ನಿಮಗೆ ಏನು ಬೇಕೋ ಅದನ್ನು ಮಾಡಿ. ನಾನು ಶೀಘ್ರದಲ್ಲೇ ಜಗತ್ತಿನ ಎದುರು ಕಾಣಿಸಿಕೊಳ್ಳಲಿದ್ದೇನೆ ಹಾಗೂ ಸಿಖ್ಖ್ ಸಮುದಾಯದ ಜೊತೆಗಿರಲಿದ್ದೇನೆ ’’ ಎಂದು ಆತ ಹೇಳಿದ್ದಾನೆ.

ಅಮೃತಪಾಲ್ ಸಿಂಗ್ ನೇತೃತ್ವದ ‘ವಾರಿಸ್ ಪಂಜಾಬ್ ದೆ ’ ಸಂಘಟನೆಯ ವಿರುದ್ಧ ಪಂಜಾಬ್ ಮಾರ್ಚ್ 28ರಂದು ಕಾರ್ಯಾಚರಣೆ ಆರಂಭಿಸಿದಾಗಿನಿಂದ,ಈ ಖಾಲಿಸ್ತಾನ್ ಬೆಂಬಲಿಗ ನಾಯಕ ತಲೆಮರೆಸಿಕೊಂಡಿದ್ದಾನೆ. ಫೆಬ್ರವರಿ 23ರಂದು ಹಲ್ಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಅಮೃತಪಾಲ್ ನ ಬೆಂಬಲಿಗನೊಬ್ಬನನ್ನು ಪೊಲೀಸರು ಬಂಧಿಸಿದ ಬಳಿಕ ಆತನ ಬಿಡುಗಡೆಗಾಗಿ ‘ವಾರಿಸ್ ಪಂಜಾಬ್ ದೆ’ ಸಂಘಟನೆಯ ಕಾರ್ಯಕರ್ತರು ಅಮೃತಸರದ ಪೊಲೀಸ್ ಠಾಣೆಯ ದಾಳಿ ನಡೆಸಿದ್ದರು. ಇದಾದ ಕೆಲವೇ ದಿನಗಳ ಬಳಿಕ ಅಮೃತಪಾಲ್ ಹಾಗೂ ಸಹಚರರ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ಆರಂಂಭಿಸಿದ್ದರು.

‘‘ ನಾನು ಸರಕಾರವನ್ನುದ್ದೇಶಿಸಿ ಮಾತನಾಡುತ್ತಿಲ್ಲ. ಶರಣಾಗತನಾಗಲು ನಾನು ಯಾವುದೇ ಷರತ್ತುಗಳನ್ನು ಒಡ್ಡಿಲ್ಲ ಎಂದು ಆತ ಎರಡನೆ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿ ತನಗೆ ಥಳಿಸಬಾರದೆಂಬುದು ಸೇರಿದಂತೆ ಶರಣಾಗತಿಗೆ ನಾನು ಮೂರು ಶರತ್ತುಗಳನ್ನು ಮುಂದಿಟ್ಟಿದ್ದೇನೆಂಬ ಸುಳ್ಳು ವದಂತಿಗಳನ್ನು ಹರಡಲಾಗುತ್ತಿದೆ. ನಿಮಗೆ ಬೇಕಾದ ಹಾಗೆ ಥಳಿಸಿ. ನಾನು ಯಾವುದೇ ಚಿತ್ರಹಿಂಸೆ ಹಾಗೂ ಜೈಲು ವಾಸಕ್ಕೆ ಹೆದರುವವನಲ್ಲ ಎಂದು ಅಮೃತಪಾಲ್ ಹೇಳಿದ್ದಾನೆ.

ಎಪ್ರಿಲ್ 14ರಂದು ಆಚರಿಸಲಾಗುವ ಬೈಶಾಖಿ ಹಬ್ಬದ ಸಂದರ್ಭದಲ್ಲಿ ಸಿಖ್ಖರ ಅರ್ಧವಾರ್ಷಿಕ ಮಹಾಸಭೆ ‘ಸರಬತ್ ಖಾಲ್ಸಾ’ವನ್ನು ಕರೆಯಬೇಕೆಂದು ಅವರು ಸಿಖ್ಖರ ಪರಮೋಚ್ಛ ಧಾರ್ಮಿಕ ಪೀಠವಾದ ಅಖಾಲ್ ತಖ್ತ್ನ ವರಿಷ್ಠ ಜಾತೇದಾರ್ ಗ್ಯಾನಿ ಹರ್ಪ್ರೀತ್ ಸಿಂಗ್ ಗೆ  ಅವರು ಮನವಿ ಮಾಡಿದರು.

ಹರ್ಪ್ರೀತ್ ಸಿಂಗ್ ತನ್ನ ಸಮುದಾಯದ ಬಗ್ಗೆ ಅವರು ಪ್ರಾಮಾಣಿಕ ಕಳಕಳಿ ಹೊಂದಿದ್ದಾರೆಯೇ ಇಲ್ಲವೇ ಎಂಬುದಕ್ಕೆ ಇದು ಅವರಿಗೊಂದು ಸತ್ವ ಪರೀಕ್ಷೆಯಾಗಲಿದೆಯೆಂದು ಅಮೃತಪಾಲ್ ಸಿಂಗ್ ತನ್ನ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

Similar News