ಹೈದರಾಬಾದ್ ವಿ.ವಿ.ಯ ಪಿಎಚ್ ಡಿ ಪ್ರವೇಶದಲ್ಲಿ ಜಾತಿವಾದಿ ಶ್ರೇಣೀಕರಣ ವ್ಯವಸ್ಥೆ : ಎಎಸ್ಎ ಆರೋಪ

Update: 2023-03-31 16:00 GMT

ಹೈದರಾಬಾದ್, ಮಾ. 31: ಹೈದರಾಬಾದ್ ವಿಶ್ವವಿದ್ಯಾನಿಲಯದ ಪಿಎಚ್ ಡಿ ಪ್ರವೇಶದಲ್ಲಿ ತಾರತಮ್ಯದ ಶ್ರೇಣೀಕರಣ ವ್ಯವಸ್ಥೆ ಕುರಿತು ವಿ.ವಿ.ಯ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ (ಎಎಸ್ಎ) 7 ಪುಟಗಳ ವರದಿಯೊಂದನ್ನು ಪ್ರಕಟಿಸಿದೆ.

ಕಳೆದ ಐದು ವರ್ಷಗಳಲ್ಲಿ ಐಐಟಿ ಹಾಗೂ ಐಐಎಂಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 19,000 ವಿದ್ಯಾರ್ಥಿಗಳು ಶಿಕ್ಷಣ ತ್ಯಜಿಸಿದ್ದಾರೆ ಎಂಬ ವರದಿ ಪ್ರಕಟವಾದ ಎರಡು ದಿನಗಳಲ್ಲಿ ಈ ವರದಿ ಪ್ರಕಟವಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಈ ವರದಿಯು ಪಿಎಚ್ಡಿ ಅಭ್ಯರ್ಥಿಗಳ ಶ್ರೇಣೀಕರಣ ಮಾದರಿಯು ಜಾತಿ ಶ್ರೇಣೀಕರಣವನ್ನು ಹೋಲುವುದರ ಬಗ್ಗೆ ಗಮನ ಸೆಳೆದಿದೆ. 

ಪ್ರವೇಶ ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕಗಳನ್ನು ಪಡೆದಿದ್ದರು ಕೂಡ ಮೀಸಲು ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಮೀಸಲಾತಿ ಇಲ್ಲದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗಿಂತ ಕಡಿಮೆ ಅಂಕ ಪಡೆದಿದ್ದಾರೆ ಎಂದು ಎಎಸ್ಎಯ ವರದಿ ಹೇಳಿದೆ. ವಿಶ್ವವಿದ್ಯಾನಿಲಯದ ವಿವಿಧ ಶಾಲೆಗಳಾದ್ಯಂತ ಇರುವ ಹಲವು ವಿಭಾಗಗಳಲ್ಲಿ ತಾರತಮ್ಯದ ಮಾದರಿಯನ್ನು ನಾವು ಅನ್ವೇಷಿಸುತ್ತಿದ್ದೇವೆ ಎಂದು ವರದಿ ಹೇಳಿದೆ. 

ವರದಿ ಹೈದರಾಬಾದ್ ನ 7 ವಿಭಾಗಗಳಾದ ಕಂಪ್ಯೂಟರ್ ವಿಜ್ಞಾನ, ಸಸ್ಯ ವಿಜ್ಞಾನ, ಜೀವ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಇಲೆಕ್ಟ್ರಾನಿಕ್ಸ್, ಅನ್ವಯಿಕ ಗಣಿತ ಹಾಗೂ ಸೂಕ್ಷ ಜೀವ ವಿಜ್ಞಾನ ವಿಭಾಗದ ಪಿಎಚ್ಡಿ ಸಂದರ್ಶನದ ಅಂಕಗಳನ್ನು ನೀಡಿದೆ.

Similar News