ಆಝಂ ಖಾನ್ ನಿವಾಸಕ್ಕೆ ವಾಮಾಚಾರದ ವಸ್ತುಗಳನ್ನು ಎಸೆದ ಆರೋಪಿಯ ಬಂಧನ

Update: 2023-04-01 16:20 GMT

ರಾಮಪುರ(ಉ.ಪ್ರ.),ಎ.1 : ಅಪರಿಚಿತ ವ್ಯಕ್ತಿಯೊಬ್ಬ ಬಟ್ಟೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒಳಗೊಂಡ ಸಣ್ಣ ಪೊಟ್ಟಣವೊಂದನ್ನು ತನ್ನ ಮನೆಯ ಮುಖ್ಯಗೇಟ್ ನೊಳಗೆ ಎಸೆದಿರುವುದಾಗಿ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅವರ ಪತ್ನಿ ಪೊಲೀಸರಿಗೆ ಶನಿವಾರ ದೂರು ನೀಡಿದ್ದಾರೆ. ವಾಮಾಚಾರದ ಕೃತ್ಯ ಇದಾಗಿರಬಹುದೆಂದು ಆಕೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಅಸ್ವಸ್ಥನೊಬ್ಬ ಈ ಕೃತ್ಯವನ್ನು ಎಸಗಿದ್ದು ಆತನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಝಂಖಾನ್ ಅವರ ನಿವಾಸದ ಹೊರಗೆ ನಿಯೋಜಿಸಲಾಗಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಗುರುವಾರ ಮುಂಜಾನೆ 7 ಗಂಟೆಯ ಹೊತ್ತಿಗೆೆ ಈ ಘಟನೆ ನಡೆದಿರುವುದಾಗಿ ಮಾಜಿ ಸಂಸದೆಯೂ ಆದ ತಾಝೀನ್ ಫಾತಿಮಾ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯು ಪೊಟ್ಟಣವನ್ನು ಎಸೆಯೆವವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಫಾತಿಮಾ ಈ ಬಗ್ಗೆ ರಾಮಪುರ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದು, ದೊಡ್ಡ ಸಂಚೊಂದರ ಭಾಗ ಇದಾಗಿರಬಹುದೆಂದು ಆಕೆ ಸಂದೇಹ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಹಾಗೂ ಇತರ ಭದ್ರತಾ ಸಿಬ್ಬಂದಿ ದಿನದ 24 ಗಂಟೆಗಳ ಕಾಲವೂ ಮನೆಯನ್ನು ಕಾವಲು ಕಾಯುತ್ತಿರುವಾಗ, ಇಂತಹ ಭದ್ರತಾ ಲೋಪ ಹೇಗೆ ಸಂಭವಿಸಲು ಸಾಧ್ಯವೆಂದು ಆಕೆ ಪ್ರಶ್ನಿಸಿದ್ದಾರೆ. ಅಝಂ ಖಾನ್ ರಾಮಪುರ ಲೋಕಸಭಾ ಕ್ಷೇತದ ಸಂಸದರಾಗಿ ಕಾರ್ಯನಿರ್ವಹಿಸಿದ್ದ. ಮತ್ತು ರಾಮಪುರ ವಿಧಾನಸಭಾ ಕ್ಷೇತ್ರವನ್ನು ಅವರು 10 ಸಲ ಪ್ರತಿನಿಧಿಸಿದ್ದಾರೆ. ದ್ವೇಷ ಭಾಷಣದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಅವರನ್ನು ದೋಷಿಯೆಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿದ ಬಳಿಕ ಅವರ ವಿಧಾನಸಬಾ ಸದಸ್ಯತ್ವವು ರದ್ದಾಗಿತ್ತು.

ಅಝಂ ಖಾನ್ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.

Similar News