ಅಮೆರಿಕ: ಸುಂಟರಗಾಳಿಯ ಅಬ್ಬರ 3 ಮಂದಿ ಮೃತ್ಯು; ವ್ಯಾಪಕ ಹಾನಿ

Update: 2023-04-01 16:25 GMT

ವಾಷಿಂಗ್ಟನ್, ಎ.1: ದಕ್ಷಿಣ ಅಮೆರಿಕಾದ ಅರ್ಕಾಂಸಸ್ ರಾಜ್ಯದಲ್ಲಿ ಬೀಸಿದ ವಿನಾಶಕಾರಿ ಸುಂಟರಗಾಳಿಯಿಂದ ವ್ಯಾಪಕ ಹಾನಿಯಾಗಿದ್ದು ಮೂರು ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮಧ್ಯ ಅರ್ಕಾಂಸಾಸ್ನಲ್ಲಿ ಭಾರೀ ಹಾನಿಯಾಗಿದ್ದು ಹಲವು ಮನೆ, ಕಟ್ಟಡಗಳ ಛಾವಣಿ ಹಾರಿಹೋಗಿದೆ. ಈ ಪ್ರದೇಶದಲ್ಲಿ ಕನಿಷ್ಟ 28 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗವರ್ನರ್ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.

ಅರ್ಕಾಂಸಾಸ್ ರಾಜ್ಯದ ಪೂರ್ವದಲ್ಲಿರುವ ವಿನ್ನೆಯಲ್ಲಿ ಇಬ್ಬರು ಮತ್ತು ಪುಲಾಸ್ಕಿ ಕೌಂಟಿಯಲ್ಲಿ ಒಬ್ಬ ಮೃತಪಟ್ಟಿದ್ದಾನೆ.

ಸಮೀಪದ ಇಲಿನೋಯಿಸ್ ರಾಜ್ಯದಲ್ಲಿರುವ ಅಪೋಲೋ ನಾಟಕಶಾಲೆಯ ಛಾವಣಿ ಕುಸಿದುಬಿದ್ದಾಗ ಅದರಡಿ ಸಿಲುಕಿ ಓರ್ವ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಇಲಿನೋಯಿಸ್, ಟೆನೆಸ್ಸೀ ಮತ್ತು ಲೋವಾ ನಗರಗಳ ಕೆಲವು ಪ್ರದೇಶಗಳಲ್ಲಿ ಸುಂಟರಗಾಳಿಯ ಅಬ್ಬರ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.

Similar News