ಭಯೋತ್ಪಾದನೆ ಆರೋಪ: 7 ವರ್ಷಗಳಿಂದ ಜೈಲಿನಲ್ಲಿದ್ದ ಭಟ್ಕಳದ ವ್ಯಕ್ತಿ ನ್ಯಾಯಾಲಯದಿಂದ ಖುಲಾಸೆ

ಅಬ್ದುಲ್ ವಾಹಿದ್ ಸಿದ್ದಿಬಾಪ ಬಿಡುಗಡೆಗೆ ಆದೇಶಿಸಿದ ದಿಲ್ಲಿ ಕೋರ್ಟ್

Update: 2023-04-02 14:05 GMT

ಭಟ್ಕಳ: ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪ ಎಂಬವರನ್ನು ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಬಿಡುಗಡೆಗೆ ಆದೇಶ ಹೊರಡಿಸಿದೆ.

ನಿಷೇಧಿತ ಸಂಘಟನೆ ಇಂಡಿಯನ್ ಮುಜಾಹಿದೀನ್ ಸದಸ್ಯ ಹಾಗೂ 2007 ರಲ್ಲಿ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ಆರೋಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಿದ್ದಿಬಾಪ ಅವರನ್ನು 2016ರಲ್ಲಿ ಬಂಧಿಸಿತ್ತು.

"ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪ ಅವರನ್ನು ಏಳು ವರ್ಷಗಳ ಹಿಂದೆ ಭಯೋತ್ಪಾದಕ ಚಟುವಟಿಕೆ ಆರೋಪದಲ್ಲಿ ಬಂಧಿಸಲಾಗಿತ್ತು. ಈಗ ನ್ಯಾಯಾಲಯ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ" ಎಂದು ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ನೀಡುವ ಸಂಘಟನೆಯಾದ ಜಮೀಯತ್ ಉಲಮಾ ಹಿಂದ್ ನ ಕಾನೂನು ನೆರವು ಸಮಿತಿಯ ಮುಖ್ಯಸ್ಥ ಗುಲ್ಝಾರ್ ಅಝ್ಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅಬ್ದುಲ್ ವಾಹಿದ್ ಸಿದ್ದಿಬಾಪಾ ಅವರನ್ನು ಮೇ 20, 2016ರಂದು ಹೊಸದಿಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ NIA ಬಂಧಿಸಿತ್ತು. ಸಿದ್ದಿಬಾಪಾರನ್ನು ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸೀನ್ ಭಟ್ಕಳ್ ಸಂಬಂಧಿ ಎಂದು ಆರೋಪಿಸಲಾಗಿತ್ತು. ದುಬೈನಲ್ಲಿ ನೆಲೆಸಿದ್ದಾಗ ವಾಹಿದ್ ಸಿದ್ದಿಬಾಪಾ ಅವರು ಜನರನ್ನು ನಿಷೇಧಿತ ಸಂಘಟನೆಗೆ ಸೇರುವಂತೆ  ಮನವೊಲಿಸುತ್ತಿದ್ದರು ಅಲ್ಲದೇ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದುಬೈನಲ್ಲಿ ಹಣ ಸಂಗ್ರಹಿಸಿದ್ದಾರೆಂಬ ಆರೋಪವನ್ನೂ NIA ಹೊರಿಸಿತ್ತು. ಆದರೆ ಪಟಿಯಾಲ ಹೌಸ್ ಸೆಷನ್ ಕೋರ್ಟ್ ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಅವರನ್ನು ಖುಲಾಸೆಗೊಳಿಸಿದೆ ಮತ್ತು ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.

"ತನ್ನ ಕಕ್ಷಿದಾರ ನಿರಪರಾಧಿ ಮತ್ತು ಸುಳ್ಳು ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾನೆ ಎಂಬುದು ತಿಳಿದಿತ್ತು. ಈಗ ಆತ ನಿರಪರಾಧಿ ಎಂದು ಸಾಬೀತಾಗಿರುವುದು ಸಂತೋಷವಾಗಿದೆ. ಸೋಮವಾರ ಜೈಲಿನಿಂದ ಹೊರಬರಲಿದ್ದಾರೆ" ಎಂದು ಅಬ್ದುಲ್ ವಾಹಿದ್ ಸಿದ್ದಿಬಾಪ ಬಂಧನದ ಮೊದಲ ದಿನದಿಂದ ಪ್ರಕರಣವನ್ನು ನಿರ್ವಹಿಸುತ್ತಿದ್ದ ಜಮೀಯತುಲ್ ಉಲಮಾದ ವಕೀಲ ಎಂ.ಎಸ್.ಖಾನ್ ಹೇಳಿದ್ದಾರೆ.

Similar News