ಈ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಕೇಂದ್ರ ಶಿಕ್ಷಣ ಸಚಿವ
ಹೊಸದಿಲ್ಲಿ,ಎ.3: ಈ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಕೇಂದ್ರೀಯ ವಿವಿಗಳಲ್ಲೇ ಒಂಭತ್ತು ಪ್ರಕರಣಗಳು ವರದಿಯಾಗಿವೆ ಎಂದು ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಈ ವರ್ಷ ಐಐಟಿಗಳು ಮತ್ತು ಎನ್ಐಟಿಗಳಲ್ಲಿ ತಲಾ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. 2028 ಮತ್ತು 2023ರ ನಡುವೆ ದೇಶದ ಈ ಉನ್ನತ ಶಿಕ್ಷಣ ಸಂಸ್ಥೆಗಳ 103 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2018 ಮತ್ತು 2019ರಲ್ಲಿ ತಲಾ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ಸಂಖ್ಯೆ 2020ರಲ್ಲಿ 13ಕ್ಕೆ ಮತ್ತು 2021ರಲ್ಲಿ 10ಕ್ಕೆ ಇಳಿದಿತ್ತು.
2022ರಲ್ಲಿ 25 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು,ಈ ಪೈಕಿ ಗರಿಷ್ಠ ಪ್ರಕರಣಗಳು (9) ಐಐಟಿಗಳಿಂದ ವರದಿಯಾಗಿದ್ದವು.
2018 ಮತ್ತು 2019ರಲ್ಲಿಯೂ ತಲಾ ಎಂಟು ಗರಿಷ್ಠ ಪ್ರಕರಣಗಳು ಐಐಟಿಗಳಿಂದಲೇ ವರದಿಯಾಗಿದ್ದವು.
2020ರಲ್ಲಿ ಏಮ್ಸ್ ಮತ್ತು ಕೇಂದ್ರಿಯ ವಿವಿಗಳ ತಲಾ ನಾಲ್ವರು ವಿದ್ಯಾರ್ಥಿಗಳು ಮತ್ತು ಐಐಟಿಗಳ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
2021ರಲ್ಲಿ 10 ಆತ್ಮಹತ್ಯೆಗಳ ಪೈಕಿ ನಾಲ್ಕು ಪ್ರಕರಣಗಳು ಐಐಟಿಗಳಲ್ಲಿ ನಡೆದಿದ್ದವು.
2022ರಲ್ಲಿ ವರದಿಯಾಗಿದ್ದ 25 ಪ್ರಕರಣಗಳ ಪೈಕಿ ಒಂಭತ್ತು ಐಐಟಿಗಳಲ್ಲಿ,ಏಳು ಎನ್ಐಟಿಗಳಲ್ಲಿ,ಐದು ಕೇಂದ್ರೀಯ ವಿವಿಗಳಲ್ಲಿ ಮತ್ತು ಮೂರು ಏಮ್ಸ್ನಲ್ಲಿ ನಡೆದಿದ್ದವು.
ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳಲ್ಲಿನ ಪ್ರತಿಯೊಂದು ಆತ್ಮಹತ್ಯೆ ಪ್ರಕರಣವನ್ನು ಸರಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಆತ್ಮಹತ್ಯೆಗಳನ್ನು ತಡೆಯಲು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಧಮೇಂದ್ರ ಪ್ರಧಾನ ಲಿಖಿತ ಉತ್ತರದಲ್ಲಿ ತಿಳಿಸಿದರು.