ಪ್ರಧಾನಿಯ ವಿದ್ಯಾರ್ಹತೆ ಮುಚ್ಚಿಡುವ ವಿಷಯವೆ?

Update: 2023-04-05 04:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಸದ್ಯ ಈ ದೇಶದಲ್ಲಿ ಎರಡು ಪ್ರಶ್ನೆಗಳು ಮಹತ್ವವನ್ನು ಪಡೆದುಕೊಂಡಿವೆ. ಮೊದಲನೆಯದು, ‘‘ಅದಾನಿ ಕಂಪೆನಿಗಳಿಗೆ 20,000 ಕೋಟಿ ರೂ. ಎಲ್ಲಿಂದ ಬಂತು?’’. ಇನ್ನೊಂದು ‘‘ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆಯೇನು?’’. ಈ ಎರಡೂ ಪ್ರಶ್ನೆಗಳ ಕಾರಣಕ್ಕಾಗಿ ಇಬ್ಬರು ನಾಯಕರು ಈಗಾಗಲೇ ದಂಡ ತೆತ್ತಿದ್ದಾರೆ. ಮೊದಲ ಪ್ರಶ್ನೆಗಾಗಿ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾತನಾಡುವ ಹಕ್ಕನ್ನೇ ಕಳೆದುಕೊಂಡಿದ್ದರೆ, ಎರಡನೆಯ ಪ್ರಶ್ನೆಗಾಗಿ ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್‌ಗೆ ಹೈಕೋರ್ಟ್ 25,000 ರೂ. ದಂಡವನ್ನು ವಿಧಿಸಿದೆ. ಆದರೆ ಎರಡೂ ಪ್ರಶ್ನೆಗಳು ನಿರ್ಲಕ್ಷಿಸುವಂತಹದ್ದಲ್ಲ. ಒಂದು, ಈ ದೇಶದ ಹಿತಾಸಕ್ತಿಗೆ ಸಂಬಂಧಿಸಿದ್ದಾದರೆ, ಇನ್ನೊಂದು ಪ್ರಧಾನಿಯ ವರ್ಚಸ್ಸಿಗೆ ಸಂಬಂಧಿಸಿದ್ದು. ಶೇರು ವಂಚನೆಗಾಗಿ ಅದಾನಿ ಕಂಪೆನಿ ವಿಶ್ವಾದ್ಯಂತ ಸುದ್ದಿಯಲ್ಲಿದೆ. ನಾಳೆ ಅದಾನಿ ಕಂಪೆನಿ ಮುಳುಗಿದ್ದೇ ಆದರೆ, ದೇಶದ ಆರ್ಥಿಕತೆಯ ಮೇಲೆಯೂ ಅದು ದುಷ್ಪರಿಣಾಮವನ್ನು ಬೀರಲಿದೆ.

ಅದಾನಿ ಕಂಪೆನಿಗಳಿಗೆ ದೇಶದೊಳಗಿರುವ ಕೆಲವು ನಿಗೂಢ ಶಕ್ತಿಗಳು ಹೂಡಿಕೆ ಮಾಡಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಶಕ್ತಿಗಳೇ ಅದಾನಿಯನ್ನು ರಕ್ಷಿಸುತ್ತಿವೆ ಎನ್ನಲಾಗುತ್ತಿದೆ. ಆದುದರಿಂದ, 20,000 ಕೋಟಿ ರೂ. ಎಲ್ಲಿಂದ ಬಂತು ಎನ್ನುವ ರಾಹುಲ್ ಗಾಂಧಿಯ ಪ್ರಶ್ನೆ, ಇಡೀ ದೇಶದ ಪ್ರಶ್ನೆಯೂ ಹೌದು. ಇದಕ್ಕೆ ಉತ್ತರಿಸುವುದು ಸರಕಾರದ ಕರ್ತವ್ಯ. ಆದರೆ ಈವರೆಗೆ ಈ ಪ್ರಶ್ನೆಗೆ ಸರಕಾರ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಬದಲಿಗೆ, ಈ ಪ್ರಶ್ನೆಯನ್ನು ಕೇಳಿದವರನ್ನೇ ಬಗ್ಗು ಬಡಿಯುವ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ. ಎರಡನೆಯ ಪ್ರಶ್ನೆ ತೀರಾ ಸರಳವಾದುದು. ಇಂತಹ ಸರಳ ಪ್ರಶ್ನೆಯನ್ನು ಪ್ರಧಾನಿ ಮೋದಿಯವರು ಯಾಕೆ ಜಟಿಲವಾಗಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆ ದೇಶದ ಜನರದ್ದು. ಈ ದೇಶವನ್ನು ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಹಲವು ನಾಯಕರು ಆಳಿದ್ದಾರೆ. ಎಲ್ಲರೂ ತಮ್ಮ ವಿದ್ಯಾರ್ಹತೆಯನ್ನು ಒಂದು ಹೆಗ್ಗಳಿಕೆಯಾಗಿ ಪ್ರಕಟಿಸಿಕೊಂಡವರು. ಜವಾಹರಲಾಲ್ ನೆಹರೂ ಅವರು ಇಂಗ್ಲೆಂಡಿನ ಅತ್ಯುನ್ನತ ವಿಶ್ವವಿದ್ಯಾನಿಲಯದಲ್ಲಿ ಕಲಿತವರು. ವಕೀಲರಾಗಿ ಗುರುತಿಸಿಕೊಂಡವರು. ಹತ್ತು ಹಲವು ಕೃತಿಗಳನ್ನೂ ಬರೆದವರು. ಅಟಲ್ ಬಿಹಾರಿ ವಾಜಪೇಯಿಯವರು ಹಿಂದಿ, ಸಂಸ್ಕೃತ, ಇಂಗ್ಲಿಷ್‌ನಲ್ಲಿ ಪದವಿಯನ್ನು ಪಡೆದಿದ್ದರು. ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ತನ್ನದಾಗಿಸಿಕೊಂಡವರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿದರು. ರಾಜಕೀಯ ಪ್ರವೇಶಿಸುವ ಮೊದಲೇ ಅಧ್ಯಾಪಕರಾಗಿ ಕೆಲಸ ಮಾಡಿದವರು. ಅರ್ಥಶಾಸ್ತ್ರಜ್ಞರಾಗಿ ಅದಾಗಲೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡವರು. ಈ ದೇಶದಲ್ಲಿ ಆಗಿ ಹೋದ ಯಾವ ಪ್ರಧಾನಿಯೂ ತಮ್ಮ ವಿದ್ಯಾರ್ಹತೆಯನ್ನು ಮುಚ್ಚಿಡುವ ವಿಷಯವಾಗಿಸಿಕೊಂಡಿಲ್ಲ.

ದೇಶದ ಪ್ರಧಾನಿಯ ವಿದ್ಯಾರ್ಹತೆ ದೇಶದ ಆಂತರಿಕ ಭದ್ರತೆಗೆ ಸಂಬಂಧ ಪಟ್ಟ ವಿಷಯ ಅಲ್ಲದೇ ಇರುವುದರಿಂದ, ಅದನ್ನು ಪ್ರಶ್ನಿಸಿದರೆ ಅಪರಾಧವಾಗಬೇಕಾಗಿಲ್ಲ. ಒಬ್ಬ ಪ್ರಧಾನಿಯ ವಿದ್ಯಾರ್ಹತೆ ಆತನ ಕಿರೀಟದ ಇನ್ನೊಂದು ಗರಿ. ಇಷ್ಟಕ್ಕೂ ಪ್ರಧಾನಿಯೊಬ್ಬನಿಗೆ ನಿರ್ದಿಷ್ಟ ವಿದ್ಯಾರ್ಹತೆ ಇರಬೇಕು ಎಂದೂ ಇಲ್ಲ. ಸಿವಿಲ್ ಇಂಜಿನಿಯರ್ ಡಿಪ್ಲೊಮಾ ಪಡೆದಿದ್ದ ದೇವೇಗೌಡರು ಪ್ರಧಾನಿಯಾದಾಗ ಯಾರಿಗೂ ಅವರ ವಿದ್ಯಾರ್ಹತೆ ಒಂದು ತೊಡಕು ಎಂದೆನಿಸಿದ್ದಿಲ್ಲ. ಆ ಬಗ್ಗೆ ದೇಶ ಕೀಳರಿಮೆ ಪಟ್ಟಿದ್ದೂ ಇಲ್ಲ. ‘ಮಣ್ಣಿನ ಮಗ’ನೊಬ್ಬ ದೇಶದ ಅತ್ಯುನ್ನತ ಸ್ಥಾನವನ್ನೇರಿದ ಬಗ್ಗೆ ಜನತೆ ಹೆಮ್ಮೆ ಪಟ್ಟಿದ್ದರು. ಆ ಕಾರಣಕ್ಕಾಗಿಯೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಜಾಪ್ರಭುತ್ವದ ಹೆಗ್ಗಳಿಕೆಯಾಗಿ ಚರ್ಚೆಗೊಳಗಾದರು. ಪ್ರಧಾನಿಯಾದ ಅಲ್ಪಾವಧಿಯಲ್ಲಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಅವರು ತಮ್ಮ ವಿದ್ಯಾರ್ಹತೆಯನ್ನು ಮುಚ್ಚಿಡುವ ಪ್ರಯತ್ನವನ್ನೇ ಮಾಡಲಿಲ್ಲ. ಆದುದರಿಂದ ಯಾರೂ ಅದರ ಬಗ್ಗೆ ಚರ್ಚಿಸಲೂ ಇಲ್ಲ. ‘‘ನಾನು ರೈಲ್ವೇ ಸ್ಟೇಷನ್‌ನಲ್ಲಿ ಚಹಾ ಮಾರಿದೆ’’ ಎಂದು ಮೋದಿಯವರು ಹೇಳಿಕೆ ನೀಡಿದಾಗ ಅದು ಅವರ ಪ್ರಧಾನಿ ಹುದ್ದೆಗೆ ಅನರ್ಹತೆಯಾಗಲಿಲ್ಲ. ಬದಲಿಗೆ, ತಳಸ್ತರದ ಜನರ ಸಂಕಟಗಳನ್ನು ಮೋದಿ ತಿಳಿದಿರುತ್ತಾರೆ ಎಂದು ಭಾವಿಸಿ ಅವರಿಗೆ ದೇಶದ ಜನರು ಇನ್ನಷ್ಟು ಹತ್ತಿರವಾದರು. ಆದರೆ, ಇಂದು ‘ ಅವರು ಚಹಾ ಮಾರಿರುವುದು ಹೌದೆ?’ ಎಂದು ಜನರು ಶಂಕಿಸುವಂತಾಗಿದೆ. ಅವರ ಆಡಳಿತದಲ್ಲಿ ಜನಸಾಮಾನ್ಯರ ಬದುಕು ಒಲೆಯಲ್ಲಿಟ್ಟ ಚಹಾದ ಪಾತ್ರೆಯಂತೆ ಕುದಿಯತೊಡಗಿದೆ. ತಮ್ಮ ವಿದ್ಯಾರ್ಹತೆ ಹೈಸ್ಕೂಲ್ ಮಾತ್ರ ಎಂದರೂ ಅದರಿಂದ ಪ್ರಧಾನಿ ಹುದ್ದೆಗೆ ಯಾವುದೇ ಕುಂದುಂಟಾಗುವುದಿಲ್ಲ. ಆದರೆ ಸುಳ್ಳು ವಿದ್ಯಾರ್ಹತೆಯನ್ನು ಘೋಷಿಸಿ ಜನರನ್ನು ವಂಚಿಸಿ ಪ್ರಧಾನಿಯಾದರೆ ಮಾತ್ರ ಅದು ಪ್ರಶ್ನಾರ್ಹ. ಈ ಕಾರಣದಿಂದಲೇ, ಇಂದು ದೇಶ, ಮೋದಿಯ ವಿದ್ಯಾರ್ಹತೆಯನ್ನು ತಿಳಿಯಲು ಕುತೂಹಲಗೊಂಡಿದೆ.

ಮೋದಿಯವರ ವಿದ್ಯಾರ್ಹತೆಯನ್ನು ಕೇಳಿದ್ದಕ್ಕಾಗಿ ಹೈಕೋರ್ಟ್ ಕೇಜ್ರಿವಾಲ್‌ಗೆ ದಂಡವನ್ನು ವಿಧಿಸಿದೆ. ಒಬ್ಬನ ವೈಯಕ್ತಿಕ ಮಾಹಿತಿಯನ್ನು ಕೇಳಲು ಕೇಜ್ರಿವಾಲ್ ಅನುಸರಿಸಿದ ದಾರಿ ತಪ್ಪಿರಬಹುದು. ಆದರೆ ಒಬ್ಬ ಪ್ರಧಾನಿಯ ವಿದ್ಯಾರ್ಹತೆಯನ್ನು ಪಡೆಯಲು ಒಂದು ರಾಜ್ಯದ ಮುಖ್ಯಮಂತ್ರಿಗೆ ನ್ಯಾಯಾಲಯದ ಮೆಟ್ಟಿಲೇರುವಂತಹ ಸನ್ನಿವೇಶ ಸೃಷ್ಟಿ ಮಾಡಿದವರು ಯಾರು? ಪ್ರಧಾನಿಯ ಆಸ್ತಿ ವಿವರಗಳನ್ನು ಕೇಳಿದರೆ ಅಥವಾ ಪ್ರಧಾನಿಯ ಸ್ವಿಸ್ ಬ್ಯಾಂಕಿನ ಅಕೌಂಟ್‌ಗಳನ್ನು ಕೇಳಿದರೆ ಬೇರೆ ವಿಷಯ. ಆದರೆ ಯಕಶ್ಚಿತ್ ಪ್ರಧಾನಿಯ ವಿದ್ಯಾರ್ಹತೆಯನ್ನು ಮುಚ್ಚಿ ಡುವಂತಹ ಸ್ಥಿತಿ ಯಾಕೆ ನಿರ್ಮಾಣವಾಗಿದೆ? ಈ ಪ್ರಶ್ನೆಗೆ ಬಿಜೆಪಿ ಉತ್ತರಿಸಬೇಕಾಗಿದೆ. ‘ನನ್ನ ವರ್ಚಸ್ಸಿಗೆ ಕಳಂಕ ತರಲು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ’ ಎಂದು ಮೋದಿಯವರು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದರು. ಆದರೆ ವಿದ್ಯಾರ್ಹತೆಯನ್ನು ಮುಚ್ಚಿಡುವ ಮೂಲಕ ಸ್ವತಃ ಮೋದಿಯವರೇ ಅವರ ಸ್ಥಾನಕ್ಕೆ ಕುಂದುಂಟು ಮಾಡಿದ್ದಾರೆ ಅನ್ನಿಸುವುದಿಲ್ಲವೆ? ‘ಭ್ರಷ್ಟರ ಸರ್ ನೇಮ್‌ಗಳೆಲ್ಲ ಮೋದಿ ಎಂದೇ ಯಾಕಿವೆ?’ ಎನ್ನುವ ಪ್ರಶ್ನೆಯಿಂದ ಮೋದಿಗೆ ಅಪಮಾನವಾಗುವುದು ಸಹಜ. ಆದರೆ ‘ವಿದ್ಯಾರ್ಹತೆಯನ್ನು ಪ್ರಶ್ನಿಸುವುದರಿಂದ’ ಮೋದಿಯವರಿಗೆ ಅಪಮಾನವಾಗುವುದು ಹೇಗೆ?

‘ಈ ದೇಶದ ಮಾಜಿ ಪ್ರಧಾನಿ ನಮ್ಮ ಕಾಲೇಜಿನಲ್ಲಿ, ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕಲಿತವರು, ಅವರು ನಮ್ಮ ಹಳೆ ವಿದ್ಯಾರ್ಥಿ’ ಎಂದು ಹಲವು ಕಾಲೇಜು, ವಿಶ್ವವಿದ್ಯಾನಿಲಯಗಳು ಇಂದಿಗೂ ಹೆಮ್ಮೆ ಪಟ್ಟುಕೊಳ್ಳುತ್ತವೆ. ತಮ್ಮ ಶಾಲೆಯ ಹಿರಿಮೆಯನ್ನು ಸಾರುವುದಕ್ಕೆ ಅದನ್ನು ಬಳಸಿಕೊಳ್ಳುತ್ತವೆ. ಆದರೆ ಯಾವುದೇ ಕಾಲೇಜುಗಳು ಈವರೆಗೆ ‘ಪ್ರಧಾನಿ ಮೋದಿ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ’ ಎಂದು ಘೋಷಿಸಿಕೊಂಡಿಲ್ಲ. ಹೆಮ್ಮೆ ಪಟ್ಟಿದ್ದೂ ಇಲ್ಲ. ಗುಜರಾತ್‌ನ ಮುಖ್ಯಮಂತ್ರಿ ಯಾಗಿರುವ ಕಾಲದಲ್ಲಿ ಮೋದಿ ತಮ್ಮನ್ನು ತಾವು ‘ಅವಿವಾಹಿತ’ ಎಂದೇ ಹೇಳಿಕೊಂಡಿದ್ದರು. ಆದರೆ ಅವರು ವಿವಾಹವಾಗಿರುವುದು ಮತ್ತು ಪತ್ನಿಗೆ ವಿಚ್ಛೇದನವನ್ನೂ ನೀಡದೆ ತ್ಯಜಿಸಿರುವುದು ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವಷ್ಟೇ ಅದನ್ನು ಒಪ್ಪಿಕೊಂಡರು. ಮೋದಿಯವರು ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರೆ ಸಮಸ್ಯೆಯಿಲ್ಲ. ಆದರೆ ಅವರು ಸುಳ್ಳು ವಿದ್ಯಾರ್ಹತೆಯನ್ನು ಘೋಷಿಸಿ ಈ ದೇಶದ ಪ್ರಧಾನಿಯಾಗಿದ್ದಾರೆ ಎಂದಾದರೆ ಅದು ದೇಶಕ್ಕೆ ಮಾಡಿದ ವಂಚನೆ. ಆದುದರಿಂದ, ಪ್ರಧಾನಿ ಸ್ಥಾನದ ಘನತೆಯನ್ನು ಉಳಿಸುವುದಕ್ಕಾದರೂ ತನ್ನ ವಿದ್ಯಾರ್ಹತೆಯನ್ನು ಸ್ವತಃ ಮೋದಿಯವರೇ ಬಹಿರಂಗ ಪಡಿಸಿ ಅನಗತ್ಯ ವಿವಾದಕ್ಕೆ ಕೊನೆ ಹಾಡಬೇಕು.

Similar News