ಎ.8ಕ್ಕೆ ‘ನೂರಾರು ಲೇಖಕರ ನೂರಾರು ಕಥೆಗಳು’ ಬಿಡುಗಡೆ
ಉಡುಪಿ, ಎ.5: ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಸಕ್ತ ಕಥೆಗಾರರಿಂದ ಆಹ್ವಾನಿಸಿದ್ದ ಸಣ್ಣ ಕತೆಗಳಿಗೆ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದ್ದು, ಸುಮಾರು 400ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಸ್ವೀಕರಿಸಲಾಗಿತ್ತು.
ಇದರಲ್ಲಿ ಮೊದಲ ಹಂತದಲ್ಲಿ 117 ಕಥೆಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳನ್ನು ‘ನೂರಾರು ಲೇಖಕರ ನೂರಾರು ಕಥೆಗಳು’ ಎಂಬ ಕಥಾ ಸಂಕಲನದ ಮೂಲಕ ಪ್ರಕಟಿಸಲಾಗುತ್ತಿದೆ. ಕೃತಿ ಬಿಡುಗಡೆಗೆ ಸಿದ್ಧವಾಗಿದ್ದು, ಎ.8ರ ಶನಿವಾರ ಸಂಜೆ 5:00ಕ್ಕೆ ಸರಿಯಾಗಿ ಉಡುಪಿಯ ಹೊಟೇಲ್ ಕಿದಿಯೂರಿನ ಪವನ್ ರೂಫ್ ಟಾಪ್‌ನಲ್ಲಿ ಇದರ ಲೋಕಾರ್ಪಣೆ ನಡೆಯಲಿದೆ. ಹಿರಿಯ ಪತ್ರಕರ್ತ ಹಾಗೂ ಖ್ಯಾತನಾಮ ಸಾಹಿತಿ ಜೋಗಿ (ಗಿರೀಶ್ ರಾವ್ ಹತ್ವಾರ್) ಬಿಡುಗಡೆಗೊಳಿಸಲಿದ್ದಾರೆ. ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ.
ವಸಂತ ಗಿಳಿಯಾರು ಪುಸ್ತಕವನ್ನು ಪರಿಚಯಿಸಿದರೆ, ಸುರೇಂದ್ರ ನಾಯಕ್ ಹಾಗೂ ಪ್ರೊ.ಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಕೃತಿ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.