×
Ad

ಕಾಕ್‌ಪಿಟ್‌ನೊಳಗೆ ನುಗ್ಗಿದ ಹಾವು: ವಿಮಾನ ತುರ್ತು ಭೂಸ್ಪರ್ಷ

ಪೈಲಟ್ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ

Update: 2023-04-06 13:56 IST

ಜೊಹಾನ್ಸ್‌ಬರ್ಗ್: ವಿಮಾನ ಹಾರಾಟದ ಮಾರ್ಗಮಧ್ಯೆ ತೀವ್ರ ವಿಷಕಾರಿ ಹಾವೊಂದು ಕಾಕ್‌ಪಿಟ್‌ನೊಳಗೆ ನುಸುಳಿದರೂ ಧೃತಿಗೆಡದೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾದ ದಕ್ಷಿಣ ಆಫ್ರಿಕಾ ಪೈಲಟ್ ರುಡಾಲ್ಫ್‌ ಎರಾಸ್ಮಸ್ ಅವರ ಸಮಯಪ್ರಜ್ಞೆಯನ್ನು ಹಲವಾರು ತಜ್ಞರು ಶ್ಲಾಘಿಸಿದ್ದಾರೆ.

ತಾನು ನೋಡಿದ ಕೂಡಲೇ ಸರ್ಪವು ತನ್ನ ಆಸನದ ಕೆಳಗೆ ನುಸುಳಿದರೂ ಧೃತಿಗೆಡದ ಎರಾಸ್ಮಸ್ ವಿಮಾನ ತುರ್ತು ಭೂಸ್ಪರ್ಷ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ವೋರ್ಸೆಸ್ಟರ್‌ನಿಂದ ನೆಲ್ಸ್‌ಪ್ರೂಟ್‌ವರೆಗೆ ನಾಲ್ಕು ಮಂದಿ ಪ್ರಯಾಣಿಕರೊಂದಿಗೆ ಅವರು ಸಣ್ಣ ವಿಮಾನವನ್ನು ಚಲಾಯಿಸುತ್ತಿದ್ದರು.

TimeLive ಅಂತರ್ಜಾಲ ತಾಣಕ್ಕೆ ತಾನು ಎದುರಿಸಿದ ಇಕ್ಕಟ್ಟಿನ ಕುರಿತು ವಿವರಿಸಿರುವ ಎರಾಸ್ಮಸ್, "ನಾವು ನಿಯಮಾನುಸಾರ ಸೋಮವಾರ ಪ್ರಯಾಣಪೂರ್ವ ಹಾರಾಟ ನಡೆಸಿದಾಗ ವೋರ್ಸ್‌ಸ್ಟರ್ ವಿಮಾನ ನಿಲ್ದಾಣದಲ್ಲಿನ ಸಿಬ್ಬಂದಿಗಳು ರವಿವಾರ ಮಧ್ಯಾಹ್ನ ತಾವು ರೆಕ್ಕೆಗಳ ಅಡಿ ಹಾವು ಇರುವುದನ್ನು ಕಂಡೆವು ಎಂದು ನಮಗೆ ತಿಳಿಸಿದರು. ಅವರೇ ಖುದ್ದು ಅದನ್ನು ಹಿಡಿಯಲು ಪ್ರಯತ್ನಿಸಿದರಾದರೂ ಅದು ಎಂಜಿನ್ ಡಬ್ಬಿಯೊಳಗೆ ನುಸುಳಿತು. ಸಿಬ್ಬಂದಿಗಳ ಗುಂಪು ಎಂಜಿನ್ ಡಬ್ಬಿಯ ಮುಚ್ಚಳವನ್ನು ತೆರೆದರಾದರೂ ಅಲ್ಲಿ ಹಾವು ಕಂಡು ಬರಲಿಲ್ಲ. ಹೀಗಾಗಿ ಹಾವು ಹೊರ ಹೋಗಿರಬಹುದು ಎಂದು ಅವರು ಭಾವಿಸಿದರು" ಎಂದು ಹೇಳಿದ್ದಾರೆ.

" ವಿಷಕಾರಿ ಹಾವೊಂದು ತನ್ನ ತಲೆಯನ್ನು ನನ್ನ ಆಸನದ ಕೆಳಗೆ ತೂರಿಸುತ್ತಿರುವುದನ್ನು ನೋಡಿದೆ. ನಾನು ಒಂದು ಕ್ಷಣ ಸ್ತಂಭೀಭೂತನಾದರೂ, ನನಗೆ ಪ್ರಯಾಣಿಕರಲ್ಲಿ ಗಾಬರಿ ಹುಟ್ಟಿಸಬಾರದು ಎಂಬ ಉದ್ದೇಶವಿದ್ದುದರಿಂದ ಆ ವಿಷಯವನ್ನು ಅವರಿಗೆ ತಿಳಿಸಬೇಕೋ ಬೇಡವೊ ಎಂದು ಗೊಂದಲಕ್ಕೊಳಗಾದೆ. ಆದರೆ, ಖಂಡಿತವಾಗಿ ಒಂದು ಹಂತದಲ್ಲಾದರೂ ಏನು ನಡೆಯುತ್ತಿದೆ ಎಂಬ ಸಂಗತಿ ಅವರಿಗೆಲ್ಲ ತಿಳಿಯಲೇಬೇಕಿತ್ತು" ಎಂದು ಹೇಳಿದ್ದಾರೆ.

"ಕೇಳಿಸಿಕೊಳ್ಳಿ, ಇಲ್ಲೊಂದು ಸಮಸ್ಯೆ ಇದೆ. ಹಾವು ವಿಮಾನದೊಳಗಿದೆ. ಅದು ನನ್ನ ಆಸನದ ಕೆಳಗಿದೆ ಎಂದು ನನಗನ್ನಿಸುತ್ತಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ವಿಮಾನವು ಭೂಸ್ಪರ್ಶ ಮಾಡಲಿದೆ ಎಂದಷ್ಟೇ ಅವರಿಗೆ ತಿಳಿಸಿದೆ" ಎಂದು ಹೇಳಿದ್ದಾರೆ.

ವಿಮಾನವು ವೆಲ್ಕಾಮ್ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದುದರಿಂದ ಜೊಹಾನ್ಸ್‌ಬರ್ಗ್‌ನ ವಿಮಾನ ನಿಲ್ದಾಣದ ನಿಯಂತ್ರಣ ಗೋಪುರವನ್ನು ಸಂಪರ್ಕಿಸಿದ ಎರಾನ್ಮಸ್, ತುರ್ತು ಸ್ಥಿತಿಯನ್ನು ಘೋಷಿಸಿದ್ದಾರೆ.

"ನಾನವರಿಗೆ ಆಮಂತ್ರಣವಿಲ್ಲದ ಪ್ರಯಾಣಿಕರೊಬ್ಬರು ನಮ್ಮೊಂದಿಗಿದ್ದಾರೆ ಎಂದು ತಿಳಿಸಿದೆ. ವಿಮಾನವು ನಿಲುಗಡೆಯಾಗುತ್ತಿದ್ದಂತೆಯೇ ನಾವೆಲ್ಲರೂ ಹೊರಬರಲು ಪ್ರಾರಂಭಿಸಿದೆವು. ಮೊದಲು ಹಿಂಬದಿಯ ಮೂವರು ಪ್ರಯಾಣಿಕರು ಹೊರ ಬಂದರು, ನಂತರ ನನ್ನೊಂದಿಗೆ ಮುಂಭಾಗದಲ್ಲಿ ಆಸೀನರಾಗಿದ್ದ ಪ್ರಯಾಣಿಕ ಹೊರ ಬಂದರು" ಎಂದು ಎರಾಸ್ಮಸ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಅಂತರ್ಜಾಲ ತಾಣಕ್ಕೆ ಪ್ರತಿಕ್ರಿಯಿಸಿರುವ 38 ವರ್ಷಗಳಿಂದ ವಿಮಾನ ಹಾರಾಟ ಉದ್ಯಮದಲ್ಲಿರುವ ವಿಮಾನ ಹಾರಾಟ ತಜ್ಞ ಹಾಗೂ ದಕ್ಷಿಣ ಆಫ್ರಿಕಾ ಮುಖ್ಯ ವಿಮಾನ ಹಾರಾಟ ವೀಕ್ಷಕ ವಿವರಣೆಗಾರ ಬ್ರಿಯಾನ್ ಎಮ್ಮೆನಿಸ್, "ಎರಾಸ್ಮಸ್ ವಿಮಾನ ಹಾರಾಟದಲ್ಲಿ ಅತ್ಯದ್ಭುತ ಕೌಶಲ ಪ್ರದರ್ಶಿಸಿದ್ದಾರೆ" ಎಂದು ಪ್ರಶಂಸಿಸಿದ್ದಾರೆ.

ವಿಮಾನ ಹಾರಾಟ ಉದ್ಯಮದ ನನ್ನ ನಾಲ್ಕು ದಶಕಗಳ ಅನುಭವದಲ್ಲಿ ಇಂತಹ ಪ್ರಕರಣದ ಕುರಿತು ಕೇಳಿಲ್ಲ ಎಂದು ಎಮ್ಮಿನಿಸ್ ಅಭಿಪ್ರಾಯ ಪಟ್ಟಿದ್ದಾರೆ.

"ಪ್ರತಿಕೂಲ ಹವಾಮಾನ, ವಿಮಾನದಲ್ಲಿ ಹಾವು ಹಾಗೂ ವಿಮಾನದಲ್ಲಿದ್ದ ನಾಲ್ಕು ಪ್ರಯಾಣಿಕರನ್ನು ಸಂಭಾಳಿಸುವ ಮೂಲಕ ಪೈಲಟ್ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ" ಎಂದು ಎಮ್ಮಿನಿಸ್ ಹೇಳಿದ್ದಾರೆ.

ಇದನ್ನೂ ಓದಿ: ತಾಜ್‌ಮಹಲ್ ಧ್ವಂಸಗೊಳಿಸಿ, ಶಹಜಹಾನ್-ಮುಮ್ತಾಝ್ ಪ್ರೀತಿಯ ಕುರಿತು ತನಿಖೆ ನಡೆಸಬೇಕು ಎಂದ ಬಿಜೆಪಿ ಶಾಸಕ  

Similar News