×
Ad

ಶಿಂಧೆ-ಬಿಜೆಪಿ ಸರಕಾರದ ಕುರಿತು 'ಮಾನಹಾನಿಕರ' ಹಾಡು ಬರೆದ ರ‍್ಯಾಪರ್ ವಿರುದ್ಧ ಪ್ರಕರಣ ದಾಖಲು

Update: 2023-04-06 15:57 IST

ಥಾಣೆ: -ಬಿಜೆಪಿ-ಏಕನಾಥ್ ಶಿಂದೆ ಬಣದ ಶಿವಸೇನೆ ಸರ್ಕಾರದ ವಿರುದ್ಧ ಮಾನಹಾನಿಕರ ಗೀತೆ ರಚಿಸಲಾಗಿದೆ ಎಂಬ ಆರೋಪದಡಿಯಲ್ಲಿ ಔರಂಗಾಬಾದ್ ಮೂಲದ ರ‍್ಯಾಪರ್ (Rapper) ರಾಜ್ ಮುಂಗಸೆ (Raj Mungase) ವಿರುದ್ಧ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.

1.08 ನಿಮಿಷದ ಅವಧಿಯ ಈ ರ‍್ಯಾಪ್ ವಿಡಿಯೊವು ಮುಖ್ಯವಾಗಿ ಹೇಗೆ ಶಾಸಕರನ್ನು ತಲಾ ರೂ. 50 ಕೋಟಿಗೆ ಖರೀದಿಸಲಾಯಿತು, ಅವರನ್ನು ಹೇಗೆ ಸೂರತ್, ಗೋವಾ ಮತ್ತು ಗುವಾಹಟಿಗೆ ಕರೆದೊಯ್ಯಲಾಯಿತು ಹಾಗೂ ಕೊನೆಗೆ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪದಚ್ಯುತಗೊಳಿಸಿ ನೂತನ ಏಕನಾಥ ಶಿಂದೆ ಬಣದ ಶಿವಸೇನೆ ಮತ್ತು ಬಿಜೆಪಿಯ ಮೈತ್ರಿ ಸರ್ಕಾರ ರಚನೆಯಾಯಿತು ಎಂಬುದರ ಸುತ್ತ ವಿಡಂಬನಾತ್ಮಕವಾಗಿ ಮೂಡಿ ಬಂದಿದೆ ಎಂದು ಹೇಳಲಾಗಿದೆ.

ಇದೀಗ ಛತ್ರಪತಿ ಸಂಭಾಜಿ ನಗರ ಎಂದು ಮರುನಾಮಕರಣಗೊಂಡಿರುವ ಔರಂಗಾಬಾದ್ ನಿವಾಸಿಯಾಗಿರುವ ಮುಂಗಸೆ ಮಾರ್ಚ್ 25ರಂದು ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ಸಂಬಂಧ ಯುವ ಸೇನಾ ಪ್ರಧಾನ ಸಮಿತಿಯ ಸದಸ್ಯೆ ಸ್ನೇಹಲ್ ಕಾಂಬ್ಳೆ ನೀಡಿರುವ ದೂರನ್ನು ಆಧರಿಸಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ. 

ಸದರಿ ವಿಡಿಯೊ ಹಾಲಿ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರದ ಮಾನ ಹಾನಿ ಮಾಡುವಂತಿದೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿರುವ ಆಕೆ, ಈ ವಿಡಿಯೊವನ್ನು ಮಹಾ ವಿಕಾಸ್ ಅಘಾಡಿಯ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದರಿಂದ ಮುಂಗಸೆ ಬೆನ್ನಿಗೆ ಮಹಾ ವಿಕಾಸ್ ಅಘಾಡಿಯ ನಾಯಕರು ಇರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

ಅಂಬ್ರೆನಾಥ್ ಪೂರ್ವದ ಶಿವಾಜಿನಗರ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 501 (ಮಾನಹಾನಿ ವಿಷಯದ ಮುದ್ರಣ ಮತ್ತು ಚಿತ್ರಣ), ಸೆಕ್ಷನ್ 504 (ಶಾಂತಿಭಂಗಕ್ಕೆ ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಹಾಗೂ ಸೆಕ್ಷನ್ 502(2) (ಸಮುದಾಯಗಳ ನಡುವೆ ವೈರತ್ವ, ದ್ವೇಷ ಅಥವಾ ತಪ್ಪು ಭಾವನೆಗಳ ಸೃಷ್ಟಿ ಅಥವಾ ಪ್ರಚೋದನೆ) ಅಡಿ ಮುಂಗಸೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿವಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, "ಪ್ರಕರಣದ ಕುರಿತು ತಂಡವೊಂದು ಕಾರ್ಯಪ್ರವೃತ್ತವಾಗಿದ್ದು, ಆರೋಪಿ ರ‍್ಯಾಪರ್ ಪತ್ತೆಗೆ ಪ್ರಯತ್ನಿಸುತ್ತಿದೆ. ಆತನಿಗೆ ವಿಚಾರಣೆಗೆ ಹಾಜರಾಗುವಂತೆ ಕೂಡಲೇ ಸಮನ್ಸ್ ಜಾರಿಗೊಳಿಸಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಭಾರತೀಯ ಕಂಪೆನಿ ಲಡಾಖ್‌ನಲ್ಲಿ ಕಳೆದ 3 ವರ್ಷಗಳಲ್ಲಿ ಹೂಡಿಕೆ ಮಾಡಿಲ್ಲ: ಕೇಂದ್ರ ಸರ್ಕಾರ

Similar News