ಯಾವುದೇ ಭಾರತೀಯ ಕಂಪೆನಿ ಲಡಾಖ್‌ನಲ್ಲಿ ಕಳೆದ 3 ವರ್ಷಗಳಲ್ಲಿ ಹೂಡಿಕೆ ಮಾಡಿಲ್ಲ: ಕೇಂದ್ರ ಸರ್ಕಾರ

ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಸಹಿತ ಯಾವುದೇ ಭಾರತೀಯ ಕಂಪೆನಿಗಳು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ (Ladakh UT) ಹೂಡಿಕೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಜನತಾ ದಳ (ಯು) ಸಂಸದ ರಾಮ್ ನಾಥ್ ಠಾಕುರ್ (Janata Dal (United) MP Ram Nath Thakur) ಅವರ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯದಿಂದ ಮೇಲಿನ ಮಾಹಿತಿ ಬಂದಿದೆ.
ಲಡಾಖ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ಕೇಂದ್ರಾಡಳಿತ ಪ್ರದೇಶದ ಹೊರಗಿನ ಯಾರೂ ಜಮೀನು ಖರೀದಿಸಿಲ್ಲ ಎಂಬ ಮಾಹಿತಿಯನ್ನು ಸರ್ಕಾರ ನೀಡಿದೆ.
ಅದೇ ಸಂಸದರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೇ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ 2020 ರಲ್ಲಿ ಒಬ್ಬ ವ್ಯಕ್ತಿ, 2021 ರಲ್ಲಿ 57 ಮಂದಿ ಮತ್ತು 2022 ರಲ್ಲಿ 127 ಮಂದಿ, ಹೀಗೆ ಒಟ್ಟು 185 ಜನರು ಜಮೀನು ಖರೀದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಒಟ್ಟು 1559 ಭಾರತೀಯ ಕಂಪೆನಿಗಳು ಹೂಡಿಕೆ ಮಾಡಿವೆ. ಆರ್ಥಿಕ ವರ್ಷ 2020-21 ರಲ್ಲಿ 310 ಕಂಪೆನಿಗಳು, 2021-22 ರಲ್ಲಿ 175 ಕಂಪೆನಿಗಳು ಹಾಗೂ 2022-23 ರಲ್ಲಿ 1,074 ಕಂಪೆನಿಗಳು ಜಮ್ಮು ಕಾಶ್ಮೀರದಲ್ಲಿ ಹೂಡಿಕೆ ಮಾಡಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: NCERT ಪಠ್ಯದಿಂದ RSS ನಿಷೇಧ, ಗಾಂಧೀಜಿ ಕುರಿತ ಉಲ್ಲೇಖಗಳನ್ನು ಕೈಬಿಟ್ಟ ಕ್ರಮ ಟೀಕಿಸಿದ ಇತಿಹಾಸಕಾರರು, ಶಿಕ್ಷಣ ತಜ್ಞರು







