×
Ad

14 ಜಿಲ್ಲೆಗಳಲ್ಲಿ ಸಬ್ಸಿಡಿ ದರಗಳಲ್ಲಿ ಪಡಿತರ ವಿತರಣೆಯನ್ನು ನಿಲ್ಲಿಸಿದ ಮಹಾರಾಷ್ಟ್ರ: ಮಹಿಳೆಯರ ತೀವ್ರ ಆಕ್ರೋಶ

"ನಾವು ಹೇಗೆ ಬದುಕುಳಿಯುತ್ತೇವೋ ನನಗೆ ಗೊತ್ತಿಲ್ಲ"

Update: 2023-04-06 18:26 IST

ಮುಂಬೈ: ರೈತರ ಆತ್ಮಹತ್ಯೆಗಳಿಂದ ಪೀಡಿತ ರಾಜ್ಯದ 14 ಜಿಲ್ಲೆಗಳಲ್ಲಿ ಸಬ್ಸಿಡಿ ದರಗಳಲ್ಲಿ ಪಡಿತರ ವಿತರಣೆಯನ್ನು ಮಹಾರಾಷ್ಟ್ರ ಸರಕಾರವು ಸ್ಥಗಿತಗೊಳಿಸಿದೆ. ತಮ್ಮ ಕುಟುಂಬದ ತುತ್ತಿನ ಚೀಲಗಳನ್ನು ತುಂಬಲು ಸರಕಾರದ ಪಡಿತರವನ್ನೇ ಅವಲಂಬಿಸಿದ್ದ ಮಹಿಳೆಯರು ಈ ಕ್ರಮದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಾಲ ಮನ್ನಾ ಯೋಜನೆಗಳ ಹೊರತಾಗಿಯೂ 2021ಕ್ಕೆ ಹೋಲಿಸಿದರೆ 2022ರಲ್ಲಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಕೇವಲ ಎಂಟು ತಿಂಗಳುಗಳಲ್ಲಿ ರಾಜ್ಯದಲ್ಲಿ 1875 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು ಎಂದು newslaundry.com ವರದಿ ಮಾಡಿದೆ.

 ರಾಜ್ಯ ಸರಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದ್ದ ಔರಂಗಾಬಾದ್, ಜಾಲ್ನಾ, ಬೀಡ್, ನಾಂದೇಡ್, ಉಸ್ಮಾನಾಬಾದ್, ಪರ್ಭನಿ, ಲಾತೂರ, ಹಿಂಗೋಲಿ, ಅಮರಾವತಿ,ವಾಶಿಮ್,ಅಕೋಲಾ, ಬುಲ್ಢಾನಾ, ಯವತ್ಮಾಲ್ ಮತ್ತು ವಾರ್ದಾ ಈ 14 ಜಿಲ್ಲೆಗಳಲ್ಲಿಯ ಕೃಷಿಕ ಕುಟುಂಬಗಳಿಗೆ ಸಬ್ಸಿಡಿ ದರಗಳಲ್ಲಿ ಪಡಿತರವನ್ನು ವಿತರಿಸುತ್ತಿತ್ತು. ಈ ಜಿಲ್ಲೆಗಳಲ್ಲಿ ಪಡಿತರ ವಿತರಣೆಯನ್ನು ನಿಲ್ಲಿಸಲು ಸರಕಾರವು 2023.ಫೆ.28ರಂದು ನಿರ್ಣಯವನ್ನು ಅಂಗೀಕರಿಸಿದೆ. ಬದಲಿಗೆ ಪ್ರತಿ ಕುಟುಂಬದ ಪ್ರತಿ ಸದಸ್ಯರು ನೇರ ನಗದು ವರ್ಗಾವಣೆ ಮೂಲಕ ತಮ್ಮ ಬ್ಯಾಂಕ್ ಖಾತೆಯಲ್ಲಿ ಮಾಸಿಕ 150 ರೂ.ಗಳನ್ನು ಪಡೆಯಲಿದ್ದಾರೆ.

 ಪಡಿತರ ಯೋಜನೆಯಡಿ ಕೃಷಿ ಕುಟುಂಬಗಳ ಪ್ರತಿ ಸದಸ್ಯರಿಗೆ ಮಾಸಿಕ ಐದು ಕೆ.ಜಿ.ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿತ್ತು. ಪ್ರತಿ ಕೆ.ಜಿ ಗೋದಿಗೆ ಎರಡು ರೂ. ಮತ್ತು ಅಕ್ಕಿಗೆ ಮೂರು ರೂ.ಗಳನ್ನು ಈ ಕುಟುಂಬಗಳು ಪಾವತಿಸುತ್ತಿದ್ದವು. 

‘ಆಹಾರ ಧಾನ್ಯಗಳ ಬೆಲೆಗಳು ಇಷ್ಟೊಂದು ದುಬಾರಿಯಾಗಿರುವಾಗ ಈ ದುಡ್ಡಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಏನನ್ನು ನಾವು ಖರೀದಿಸಲು ಸಾಧ್ಯ? ಗೋದಿಗೆ ಪ್ರತಿ ಕೆ.ಜಿ.ಗೆ 25-30 ರೂ.ಗಿಂತ ಕಡಿಮೆಯಿಲ್ಲ ಮತ್ತು ಅಕ್ಕಿಯ ದರ ಪ್ರತಿ ಕೆ.ಜಿ.ಗೆ ಕನಿಷ್ಠ 25 ರೂ. ಇದೆ. ನಾವು ಹೇಗೆ ಬದುಕುಳಿಯುತ್ತೇವೋ ನನಗೆ ಗೊತ್ತಿಲ್ಲ’ ಎಂದು ರೇಖಾ ವಾಘ್ಮರೆ (39) ಅಳಲು ತೋಡಿಕೊಂಡರು. 

ಹಿಂಗೋಲಿ ಜಿಲ್ಲೆಯ ನಂದುಸಾ ಗ್ರಾಮದ ನಿವಾಸಿ ರೇಖಾರ ಪತಿ ನಾಮದೇವ ಐದು ವರ್ಷಗಳ ಬೆಳೆ ವೈಫಲ್ಯದಿಂದ ನೊಂದು 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2015 ಮತ್ತು 2018ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ನಾಮದೇವ ಸೇರಿದಂತೆ 12,000ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ನಾಮದೇವ ಪತ್ನಿ,ಇಬ್ಬರು ಮಕ್ಕಳು,3.5 ಎಕರೆ ಹೊಲ ಮತ್ತು ನಾಲ್ಕು ಲಕ್ಷ ರೂ.ಗಳ ಸಾಲವನ್ನು ಬಿಟ್ಟು ಹೋಗಿದ್ದರು. 

ಪತಿಯ ನಿಧನದ ಬಳಿಕ ರೇಖಾ ಕೃಷಿ ಕೆಲಸಕ್ಕೆ ಇಳಿದಿದ್ದಾರೆ,ಜೊತೆಗೆ ದಿನಗೂಲಿಗೆ ಬೇರೆ ಕಡೆಗಳಲ್ಲಿಯೂ ದುಡಿಯುತ್ತಿದ್ದಾರೆ. ಆದಾಯ ಕಡಿಮೆಯಿದ್ದರೂ ಸರಕಾರದಿಂದ ಪಡಿತರ ಧಾನ್ಯಗಳನ್ನು ಪಡೆಯುತ್ತಿದ್ದರಿಂದ ತನ್ನ ಮಕ್ಕಳಿಗೆ ಮೂರು ಹೊತ್ತಿನ ಊಟ ಹಾಕಲು ಅವರು ಚಿಂತಿಸಬೇಕಿರಲಿಲ್ಲ. ಇದೀಗ ಸರಕಾರವು ಯೊಜನೆಯನ್ನೇ ಸ್ಥಗಿತಗೊಳಿಸಿರುವುದು ಅವರ ತಲೆಯ ಮೇಲೆ ಬರಸಿಡಿಲು ಎರಗಿದಂತಾಗಿದೆ. 

ಇದು ರೇಖಾ ಅವರೊಬ್ಬರದೇ ಕಥೆಯಲ್ಲ. ಈ ಜಿಲ್ಲೆಗಳಲ್ಲಿಯ ಹಲವಾರು ರೈತ ಮಹಿಳೆಯರು ಸರಕಾರದ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಎಷ್ಟೋ ಗ್ರಾಮಗಳಲ್ಲಿ ಬ್ಯಾಂಕ್ ಸೌಲಭ್ಯವಿಲ್ಲ. ಹೀಗಾಗಿ ಸರಕಾರವು ನೀಡುವ 150 ರೂ.ಗಳನ್ನು ಪಡೆಯಲು ಅವರು ಸಮೀಪದ ಬ್ಯಾಂಕ್ ಶಾಖೆಗೆ ತೆರಳುವುದು ಅನಿವಾರ್ಯವಾಗಿದೆ. ಪ್ರಯಾಣಕ್ಕಾಗಿ ಕನಿಷ್ಠ 50 ರೂ.ಗಳನ್ನು ವ್ಯಯಿಸುವ ಜೊತೆಗೆ ಕೆಲಸಕ್ಕೆ ರಜೆ ಮಾಡಿದ್ದಕ್ಕಾಗಿ 200 ರೂ.ಗಳ ದಿನಗೂಲಿಯನ್ನು ಕಳೆದುಕೊಳ್ಳಬೇಕಿದೆ. ಸರಕಾರದ 150 ರೂ. ಗಳನ್ನು ಪಡೆಯಲು ಈ ಅವರು 250 ರೂ.ಗಳನ್ನು ಖರ್ಚು ಮಾಡಬೇಕಿದೆ ಎಂದು newslaundry.com ವರದಿ ಮಾಡಿದೆ.

Similar News