×
Ad

ತಾಯಿಯ ಮೊಬೈಲ್ ಫೋನ್ ನಲ್ಲಿ 3.21 ಲಕ್ಷ ರೂ. ಮೌಲ್ಯದ ಗೊಂಬೆಗಳ ಆರ್ಡರ್ ಮಾಡಿದ 5 ವರ್ಷದ ಬಾಲಕಿ!

Update: 2023-04-06 18:26 IST

ಮೆಸಾಚುಸೆಟ್ಸ್: ಮಕ್ಕಳು ಆಟವಾಡಿಕೊಂಡು ಸದಾ ಕಾರ್ಯಮಗ್ನವಾಗಿರಲೆಂದು ಪೋಷಕರು ತಮ್ಮ ಮೊಬೈಲ್ ಫೋನ್‌ಗಳನ್ನು ಅವರಿಗೆ ನೀಡುವುದು ಸಾಮಾನ್ಯ ಸಂಗತಿ. ಇದೇ ರೀತಿ ತನ್ನ ಪುತ್ರಿಯೂ ಕೂಡಾ ಮೊಬೈಲ್ ಸಾಧನದಲ್ಲಿ ಆಟವಾಡುವುದನ್ನು ಇಷ್ಟಪಟ್ಟಳೆಂದು ಕಾರು ಚಲಾಯಿಸುತ್ತಿದ್ದ ಅಮೆರಿಕಾ ಮಹಿಳೆಯೊಬ್ಬರು ತಮ್ಮ ಐದು ವರ್ಷದ ಪುತ್ರಿಗೆ ತಮ್ಮ ಮೊಬೈಲ್ ಫೋನ್ ನೀಡಿದ್ದಾರೆ. ಆದರೆ, ಆಕೆಯ ಪುತ್ರಿಯು 3,992 ಡಾಲರ್ (ರೂ. 3.21 ಲಕ್ಷ) ಮೌಲ್ಯದ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಆಕೆಯ ಮೊಬೈಲ್ ಫೋನ್‌ಗೆ ಹೊರಿಸಿದ್ದಾಳೆ ಎಂದು indianexpress.com ವರದಿ ಮಾಡಿದೆ.

ಬೆಳಗ್ಗೆ 2 ಗಂಟೆಯ ವೇಳೆಗೆ ತನ್ನ ಮೊಬೈಲ್‌ಗೆ ಪಠ್ಯ ಸಂದೇಶ ಬಂದಾಗಲಷ್ಟೇ ಮೆಸಾಚುಸೆಟ್ಸ್‌ನ ವೆಸ್ಟ್‌ಪೋರ್ಟ್ ನಿವಾಸಿ ಜೆಸ್ಸಿಕಾ ನ್ಯೂನ್ಸ್ ಅವರಿಗೆ ತಮ್ಮ ಪುತ್ರಿಯು ಅಮೆಝಾನ್‌ಗೆ 3,922 ಡಾಲರ್ ಮೌಲ್ಯದ ಖರೀದಿ ಆದೇಶ ನೀಡಿದ್ದಾಳೆ ಎಂಬ ಸಂಗತಿ ತಿಳಿದು ಬಂದಿದೆ. ಮೊದಲಿಗೆ ಆಕೆ ತನ್ನ ಖಾತೆಗೆ ಯಾರಾದರೂ ಕನ್ನ ಹಾಕಿರಬಹುದು ಎಂದು ಭಾವಿಸಿದ್ದರಾದರೂ, ಅಮೆಝಾನ್‌ನೊಂದಿಗೆ ವಿಚಾರಿಸಿದಾಗ ಆಕೆಯ ಪುತ್ರಿ ಲೈಲಾ ವಾರ್ಸಿಕೊ ಗೊಂಬೆಗಳು ಹಾಗೂ ಪಾದರಕ್ಷೆಗಳಿಗಾಗಿ ಆದೇಶ ನೀಡಿದ್ದಾಳೆ ಎಂಬ ಸಂಗತಿ ಮನವರಿಕೆಯಾಗಿದೆ.

TODAY.com ಪ್ರಕಾರ, ಆಕೆ 10 ಮಕ್ಕಳ ಡರ್ಟ್ ಬೈಕ್ ಹಾಗೂ ಒಂದು ಎರಡು ಆಸನಗಳ ಮಕ್ಕಳ ಸವಾರಿ ಜೀಪ್ ಮತ್ತು ಮಹಿಳೆಯರ 7" ಅಳತೆಯ 10 ಜೋಡಿ ಬೂಟ್‌ಗಳನ್ನು ಆರ್ಡರ್‌ ಮಾಡಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ನ್ಯೂನ್ಸ್, "ತಮಾಷೆಯೆಂದರೆ, ಆಕೆ ಆರ್ಡರ್‌ ಮಾಡಿರುವ ಬೂಟಿನ ಅಳತೆ ನನ್ನದು" ಎಂದು ಹೇಳಿದ್ದಾರೆ.

ಲೈಲಾ ಬೈಕ್‌ಗಾಗಿ ಎರಡು ಭಿನ್ನ ಕಂಪನಿಗಳಿಗೆ ಆರ್ಡರ್‌ ನೀಡಿದ್ದಾಳೆ. ಈ ಪೈಕಿ ಒಂದು ಕಂಪನಿಯವರು ಈ ಆರ್ಡರ್ ಊರ್ಜಿತವೇ ಎಂದು ಖಾತ್ರಿ ಪಡಿಸಿಕೊಳ್ಳಲು ತಕ್ಷಣವೇ ನ್ಯೂನ್ಸ್ ಅವರಿಗೆ ಇಮೇಲ್ ರವಾನಿಸಿದ್ದಾರೆ. ನ್ಯೂನ್ಸ್ ಆ ಕಂಪನಿಯ ಆದೇಶವನ್ನು ರದ್ದುಪಡಿಸುವಲ್ಲಿ ಯಶಸ್ವಿಯಾದರೂ, ಎರಡನೆಯ ಮಾರಾಟಗಾರರು ಅದಾಗಲೇ ಉಳಿದ ಐದು ಬೈಕ್‌ಗಳನ್ನು ಅಂದೇ ರವಾನಿಸಿದ್ದರು.

ಬೂಟ್ ಆದೇಶವನ್ನು ರದ್ದುಪಡಿಸುವಲ್ಲಿ ನ್ಯೂನ್ಸ್ ಯಶಸ್ವಿಯಾಗಿದ್ದಾರೆ. ಹೀಗಿದ್ದೂ ಜೀಪ್ ಮಾರ್ಚ್ 31ರಂದು ಆಗಮಿಸಿದೆ. ಅದೃಷ್ಟವಶಾತ್, ಎಲ್ಲ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ಸಮ್ಮತಿಸಿವೆ.

ವ್ಯಾಪಾರ ಮಾಲೀಕರಾಗಿರುವ ನ್ಯೂನ್ಸ್ ಪದೇ ಪದೇ ಅಮೆಝಾನ್ ಬಳಸುತ್ತಿರುತ್ತಾರೆ ಮತ್ತು ತಮ್ಮ ಖರೀದಿ ಇತಿಹಾಸವನ್ನು ಮತ್ತೆ ಪರಿಶೀಲಿಸುತ್ತಿರಲಿಲ್ಲ.

Similar News