ಈಜಿಪ್ಟ್: ಪುರಾತನ ಕಾಲದ ಅರಮನೆಯ ಬಳಿ ಮಣ್ಣಿನಡಿ ಹಲವು ಕತ್ತರಿಸಿದ್ದ ಕೈಗಳು ಪತ್ತೆ
ಕೈರೊ, ಎ.6: ಈಜಿಪ್ಟ್ ನಲ್ಲಿರುವ ಪುರಾತನ ಕಾಲದ ಅರಮನೆಯೊಂದರ ಹೊರಗೆ ಇರುವ ಹೊಂಡದಲ್ಲಿ 12ಕ್ಕೂ ಹೆಚ್ಚು ಹಸ್ತಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪುರಾತನ ಈಜಿಪ್ಟ್ ನಲ್ಲಿದ್ದ ಭಯಾನಕ ಆಚರಣೆಯೊಂದನ್ನು ಇದು ಸಂಕೇತಿಸಿದೆ ಎಂದು `ನೇಚರ್' ಮ್ಯಾಗಝಿನ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.
ಉತ್ತರ ಈಜಿಪ್ಟ್ ನ ಅವಾರಿಸ್ ನಗರದಲ್ಲಿರುವ ಹೈಕ್ಸೋಸ್ ಅರಮನೆಯಲ್ಲಿರುವ ಹೊಂಡದ ಆಳದಲ್ಲಿ ಈ ಹಸ್ತಗಳು ಪತ್ತೆಯಾಗಿದೆ. 3000 ವರ್ಷಗಳ ಹಿಂದಿನ ಕಾಲದಲ್ಲಿ ಯುದ್ಧಕೈದಿಗಳಾಗಿ ಸೆರೆ ಸಿಕ್ಕಿದ್ದ ಶತ್ರುಗಳ ಯೋಧರ ಬಲಗೈಯ ಮುಂಗೈ ಇದಾಗಿದ್ದು ಇದರಲ್ಲಿ 11 ಪುರುಷರ ಕೈಗಳಾಗಿದ್ದರೆ 1 ಮಹಿಳೆಯ ಕೈಯಾಗಿದೆ.
15ನೇ ರಾಜವಂಶಕ್ಕೆ ಸೇರಿದ ಹೈಕ್ಸೋಸ್ ಅರಮನೆಯ ಸಿಂಹಾಸನದ ಕೋಣೆಯ ಮುಂಭಾಗದ ಅಂಗಳದಲ್ಲಿ 3 ಹೊಂಡಗಳಲ್ಲಿ ಈ ಕತ್ತರಿಸಿದ ಕೈಗಳು ಪತ್ತೆಯಾಗಿವೆ ಎಂದು ಜರ್ಮನ್ ಪುರಾತತ್ವ ಸಂಸ್ಥೆಯ ಜೂಲಿಯಾ ಗ್ರೆಸ್ಕಿ ನೇತೃತ್ವದ ಸಂಶೋಧಕರ ತಂಡದ ವರದಿ ಹೇಳಿದೆ. ಈಜಿಪ್ಟ್ ನಲ್ಲಿ ಪುರಾತತ್ವ ಶಾಸ್ತ್ರಜ್ಞರು ಇದೇ ಮೊದಲಬಾರಿಗೆ ಅಂಗಚ್ಛೇದಿತ ಕೈಗಳನ್ನು ಪತ್ತೆಹಚ್ಚಿ ವಿಶ್ಲೇಷಣೆ ನಡೆಸಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಗಿನ ಕಾಲದಲ್ಲಿ ಈಜಿಪ್ಟ್ ನಲ್ಲಿದ್ದ ಆಘಾತಕಾರಿ ಆಚರಣೆಯತ್ತ ಈ ಸಂಶೋಧನೆ ಬೆರಳು ತೋರಿಸುತ್ತದೆ. ಬಹುಷಃ ಯುದ್ಧದಲ್ಲಿ ಸೆರೆಸಿಕ್ಕ ಶತ್ರು ಸೈನಿಕರ ಹಸ್ತಗಳನ್ನು ಕತ್ತರಿಸಿ ಸಾರ್ವಜನಿಕರ ದರ್ಶನಕ್ಕಾಗಿ ಹೊಂಡಕ್ಕೆ ಎಸೆದಿರುವ ಸಾಧ್ಯತೆಯಿದೆ. ಇಂತಹ ಆಚರಣೆಯ ಕುರಿತು ಗೋರಿಗಳಲ್ಲಿ ಅಥವಾ ದೇವಾಲಯದ ಗೋಡೆಗಳಲ್ಲಿ ಚಿತ್ರಗಳ ಮೂಲಕ ಮಾಹಿತಿ ನೀಡಿರುವ ದಾಖಲೆಯಿದೆ. ಆದರೆ ವ್ಯಕ್ತಿಗಳ ಕತ್ತರಿಸಲ್ಪಟ್ಟ ಹಸ್ತ ಇದೇ ಪ್ರಥಮ ಬಾರಿಗೆ ಪತ್ತೆಯಾಗಿದೆ ಎಂದು ವರದಿ ಹೇಳಿದೆ.