ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ​ತಂಝೀಮ್ ಸಂಸ್ಥೆ

Update: 2023-04-07 12:49 GMT

ಭಟ್ಕಳ: ರಾಜ್ಯದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ನಡೆಸುತ್ತಿರುವ ಎಲ್ಲ ರೀತಿಯ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದ್ದು ಸರ್ಕಾರ ನಕಲಿ ಗೋರಕ್ಷರ ವಿರುದ್ಧ ಕಠಿಣ ಕಾನೂನು ಜರಗಿಸಬೇಕೆಂದು ಇಲ್ಲಿನ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಸಕಾರವನ್ನು ಆಗ್ರಹಿಸಿದ್ದಾರೆ. 

ಇತ್ತಿಚೆಗೆ ಮಂಡ್ಯ ಜಿಲ್ಲೆಯ ಸಾತನೂರು ಬಳಿ ಗೊರಕ್ಷಣೆಯ ಹೆಸರಲ್ಲಿ ನಡೆದಿರುವ ಇದ್ರೀಸ್ ಪಾಶ ಎಂಬವರ ಕೊಲೆಯು ಅತ್ಯಂತ ಅಮಾನವೀಯವಾಗಿದ್ದು ಮನುಷ್ಯನಾದವನು ಇಂತಹ ಕೃತ್ಯ ಎಸಗುವುದಿಲ್ಲ. ಇಂತಹ ಕೊಲೆಗಡುಕರಿಗೆ ಯಾವುದೇ ಧರ್ಮ ಇರುವುದಿಲ್ಲ. ಆದರೂ ಹಿಂದೂ ಧರ್ಮಕ್ಕೆ ಕಳಂಕ ತರುವ ಕೆಲಸವನ್ನು ಪುನಿತ್ ಕೆರೆಹಳ್ಳಿಯಂತಹ ರಾಕ್ಷಸ ಕುಲದವರು ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಆತನನ್ನು ಬಂಧಿಸಿದೆ. ಆದರೆ ಯಾವುದೇ ಕಾರಣಕ್ಕೂ ಯಾರದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಆತನ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ತಂಝೀಮ್ ಸಂಸ್ಥೆ ಆಗ್ರಹಿಸಿದೆ. 

ರಾಜ್ಯದೆಲ್ಲೆಡೆ ಜಾನುವಾರು ಮಾರಾಟಕ್ಕೆಂದು ಒಂದು ಕಡೆಯಿಂದ ಮತ್ತೊಂದು ಕಡೆ ಜಾನುವಾರು ಸಾಗಿಸುವುದು ಸ್ವಾಭಾವಿಕವಾಗಿದ್ದು ಇಂತಹ ಸಂದರ್ಭದಲ್ಲಿ ಎಲ್ಲ ರೀತಿಯ ದಾಖಲೆಗಳ ಹೊರತಾಗಿಯೂ ರಾಕ್ಷಸಿ ಮನಸ್ಸಿನ ಗೋರಕ್ಷಕರು ಲಾರಿ ಚಾಲಕನನ್ನೋ ಅಥವಾ ಲಾರಿಯಲ್ಲಿ ಕೆಲಸ ಮಾಡಿಕೊಂಡಿರುವವನ್ನೂ ಥಳಿಸಿ, ಅವರ ಮೇಲೆ ಹಲ್ಲೆಗೈದು, ತಪ್ಪಿಸಿಕೊಳ್ಳಲು ಹೋದರೆ ಅವರನ್ನು ಕೊಲೆಗೈದು ಎಸೆಯುವ ನೀಚ ಕೃತ್ಯಕ್ಕೂ ಅವರು ಹೇಸುವುದಿಲ್ಲ. ಲಾರಿ ಚಾಲಕರಲ್ಲಿ ಹೆಚ್ಚಿನದಾಗಿ ಮುಸ್ಲಿಮ್ ಸಮುದಾಯದವರೇ ಇರುವುದರಿಂದಾಗಿ ಅವರ ಮೇಲೆ ಅಕ್ರಮ ಗೋಸಾಟದ ಪ್ರಕರಣ ಹಾಕಿ ಅವರನ್ನು ಜೈಲಿಗಟ್ಟಲಾಗುತ್ತದೆ. ಗೋರಕ್ಷಕರೆಂಬ ರಾಕ್ಷಸರಿಂದ ಅವರ ಹತ್ಯೆಯಾಗುತ್ತದೆ. ಇಂತಹ ನೀಚ ಮತ್ತು ಹೇಯ ಕೃತ್ಯಗಳು ರಾಜ್ಯದಲ್ಲಿ ಮರುಕಳಿಸಬಾರದು ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು, ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆಯಾಗದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರಗಿಸಬೇಕು ಎಂದು ತಂಝೀಮ್ ಸಂಸ್ಥೆ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಪ್ರ.ಕಾ. ಅಬ್ದುಲ್ ರಕೀಬ್ ಎಂ.ಜೆ. ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  

Similar News