×
Ad

ಸರಕಾರಿ ಉದ್ಯೋಗಿಗಳ ಪಿಂಚಣಿ ವ್ಯವಸ್ಥೆ ಮರುಪರಿಶೀಲನೆಗೆ ಸಮಿತಿ ರಚನೆ

Update: 2023-04-07 21:55 IST

ಹೊಸದಿಲ್ಲಿ, ಎ. 7: ಸರಕಾರಿ ಉದ್ಯೋಗಿಗಳ ಪಿಂಚಣಿ ವ್ಯವಸ್ಥೆಯನ್ನು ಮರುಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ.

ಮರುಪರಿಶೀಲನೆಗೆ ಸಮಿತಿ ರಚಿಸುವ ವಿಷಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಮಸೂದೆ 2023ಕ್ಕೆ ತಿದ್ದುಪಡಿಗಳನ್ನು ಸಲ್ಲಿಸುವ ವೇಳೆ ಸಂಸತ್‌ನಲ್ಲಿ ಘೋಷಿಸಿದ್ದರು.

ಸರಕಾರಿ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್)ಯ ಬದಲು ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮರುಜಾರಿಗೊಳಿಸುವುದಾಗಿ ಪ್ರತಿಪಕ್ಷಗಳ ಆಡಳಿತದ ಕೆಲವು ರಾಜ್ಯ ಸರಕಾರಗಳು ಘೋಷಿಸಿವೆ. ಹಳೆಯ ಪಿಂಚಣಿ ವ್ಯವಸ್ಥೆಯ ಪ್ರಕಾರ, ನಿವೃತ್ತ ಸರಕಾರಿ ಉದ್ಯೋಗಿಗಳು ಕೊನೆಯದಾಗಿ ಪಡೆದ ವೇತನದ ಅರ್ಧದಷ್ಟನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ. 

ಬಿಜೆಪಿಯು ಸರಕಾರದ ಭಾಗವಾಗಿರುವ ಮಹಾರಾಷ್ಟ್ರದಂಥ ರಾಜ್ಯಗಳೂ ಹಿಂದಿನ ಪಿಂಚಣಿ ವ್ಯವಸ್ಥೆಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿವೆ. ಸರಕಾರಿ ಉದ್ಯೋಗಿಗಳ ಎನ್‌ಪಿಎಸ್‌ಗೆ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂದು ಹೇಳುವ ಮನವಿಗಳನ್ನು ಸರಕಾರ ಸ್ವೀಕರಿಸಿದ ಬಳಿಕ ಈ ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ, ಈ ಸಮಿತಿಗೆ ವರದಿ ಸಲ್ಲಿಸಲು ಸಮಯದ ಗಡುವು ನಿಗದಿಪಡಿಸಲಾಗಿಲ್ಲ.

ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯಲ್ಲಿ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ)ದ ಅಧ್ಯಕ್ಷರೂ ಇದ್ದಾರೆ.

ನೂತನ ಪಿಂಚಣಿ ವ್ಯವಸ್ಥೆಯು ನಿವೃತ್ತ ಸರಕಾರಿ ಉದ್ಯೋಗಿಗಳಿಗೆ ಖಚಿತ ಪಿಂಚಣಿಯ ಭರವಸೆಯನ್ನು ನೀಡುವುದಿಲ್ಲ.

Similar News