ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಅಗತ್ಯ ಸಿಬ್ಬಂದಿ ನೇಮಕಕ್ಕೆ ಆದ್ಯತೆ....
ಜನಾಗ್ರಹ: ಕಾರ್ಕಳ ವಿಧಾನಸಭಾ ಕ್ಷೇತ್ರ
ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯನಿಂದ ನಿರೀಕ್ಷಿಸುವ ಅತ್ಯಗತ್ಯ ಅಭಿವೃದ್ಧಿ ಕಾರ್ಯಗಳೇನು ಎನ್ನುವುದನ್ನು ಕ್ಷೇತ್ರದ ಆಯ್ದ ಪ್ರಮುಖರು ಇಲ್ಲಿ ಹಂಚಿಕೊಂಡಿದ್ದಾರೆ.
►ಇಷ್ಟು ವರ್ಷ ಕಳೆದರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ಪುರಸಭೆ ಇಲ್ಲಿನ ಮುಂಡ್ಲಿ ಡ್ಯಾಂನ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ. ಆದರೂ ಬೆಳೆಯುತ್ತಿರುವ ನಗರ ಹಾಗೂ ಜನಸಂಖ್ಯೆಗೆ ಅದು ಸಾಕಾಗುತ್ತಿಲ್ಲ. ಹೀಗಾಗಿ ಇದಕ್ಕೆ ಶಾಶ್ವತ ಯೋಜನೆ ರೂಪಿಸುವ ಅಗತ್ಯವಿದೆ.
►ಪುರಸಭಾ ವ್ಯಾಪ್ತಿಯ ಒಳಚರಂಡಿ ಸಮಸ್ಯೆ ಜನರನ್ನು ಕಾಡುತ್ತಿದೆ. ಇದರಿಂದ ನಗರ ಪ್ರದೇಶದಲ್ಲಿ ಎಷ್ಟೋ ಬಾವಿಗಳ ನೀರು ಹಾಳಾಗಿ ಬೇಸಿಗೆಯಲ್ಲೂ ಜನರು ಸಂಕಟಪಡುವಂತಾಗಿದೆ. ಪ್ರತೀ ಬಾರಿ ರಸ್ತೆ ಅಗೆದು ಪೈಪ್ ಜೋಡಿಸಿ ದುರಸ್ತಿ ಮಾಡಿದಾಗಲೂ ಸಮಸ್ಯೆ ಮುಂದುವರಿದಿದೆ.
►ಬಂಡಿಮಠದಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ನಿರ್ಮಿಸಿದ ಬಸ್ ನಿಲ್ದಾಣ ಕೇವಲ ಸರಕಾರಿ ಬಸ್‌ಗಳಿಗೆ ಮಾತ್ರ ಎಂಬಂತಾಗಿದೆ. ಸದಾ ಜನಜಂಗುಳಿಯಿಂದ ತುಂಬಿರುವ ಸ್ಥಳಾಭಾವದ ಹಳೆ ಬಸ್ ನಿಲ್ದಾಣ ಸಂಕಟದ ತಾಣವಾಗಿರುವುದನ್ನು ತಪ್ಪಿಸಬೇಕು.
-ಅಮ್ಜತ್, ಕಟ್ಟಡ ಗುತ್ತಿಗೆದಾರ, ಕಾರ್ಕಳ
► ಹಳ್ಳಿಯ ಒಳ ರಸ್ತೆಗಳಲ್ಲಿ ಅಗತ್ಯವಿದ್ದಲ್ಲಿ ಮೋರಿಗಳ ನಿರ್ಮಾಣ ಮತ್ತು ರಸ್ತೆಗಳಿಗೆ ಕಾಂಕ್ರಿಟ್ ಅಥವಾ ಡಾಮರೀಕರಣ ಮಾಡಲು ಕ್ರಮ ಕೈಗೊಳ್ಳಬೇಕು.
► ಸರಕಾರಿ ಕಚೇರಿಗಳಲ್ಲಿ ಲಂಚರಹಿತ ಸೇವೆ, ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಮತ್ತು ಉತ್ತಮ ಚಿಕಿತ್ಸೆಗೆ ಆದ್ಯತೆ ನೀಡಬೇಕು.
► ಸರಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳಿಗೆ ಹೆಚ್ಚಿನ ಕಲಿಕಾ ಸೌಲಭ್ಯ ಒದಗಿಸಬೇಕು. ಕ್ಷೇತ್ರದ ನಿರುದ್ಯೋಗಿ ಯುವಜನತೆಗೆ ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಯೋಜನೆಗಳನ್ನು ತರಬೇಕು.
► ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
-ನಕ್ರೆ ಜಾರ್ಜ್ ಕಾಸ್ತಲಿನೋ, ವಿಶ್ರಾಂತ ಮುಖ್ಯ ಶಿಕ್ಷಕ, ಕಾರ್ಕಳ.
►ರಾಮಸಮುದ್ರವನ್ನು ಸ್ವಚ್ಛ ಮಾಡಿ ಯಾಂತ್ರೀಕೃತ ಬೋಟ್‌ಗಳ ಮೂಲಕ ಜನರ ಮನೋರಂಜನೆಗೆ ಆಸ್ಪದ ಮಾಡಿಕೊಡಬೇಕು.
►ಕ್ಷೇತ್ರದಲ್ಲೊಂದು ವಿಮಾನ ನಿಲ್ದಾಣವನ್ನು ನಿರ್ಮಿಸಿ, ಬೆಂಗಳೂರು, ಮುಂಬೈ, ದಿಲ್ಲಿ, ಚೆನ್ನೈ, ಕೋಲ್ಕತ್ತಾ ಮಾತ್ರವಲ್ಲದೇ ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲು ಶ್ರಮಿಸಬೇಕು.
►ಕಾರ್ಕಳದಲ್ಲಿ ಈಗಾಗಲೇ ಪ್ರಾರಂಭಗೊಂಡ ಕೋಟಿ-ಚೆನ್ನಯ ಥೀಮ್-ಪಾರ್ಕ್, ಈಜುಕೊಳ, ಪರಶುರಾಮ ಥೀಮ್ ಪಾರ್ಕ್, ಅತ್ತೂರು ಸೈಂಟ್ ಲಾರೆನ್ಸ್ ಬಸಿಲಿಕಾ ಅಲ್ಲದೇ ಕಾರ್ಕಳದ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು.
-ಪ್ರೊ.ಬಿ.ಪದ್ಮನಾಭ ಗೌಡ, ನಿವೃತ ಪ್ರಾಂಶುಪಾಲರು, ಶ್ರೀಭುವನೇಂದ್ರ ಕಾಲೇಜು, ಕಾರ್ಕಳ.
►ಕ್ಷೇತ್ರದಲ್ಲಿ ಕೈಗೆಟಕುವ ರೀತಿಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ಅವಶ್ಯಕ ವಸ್ತುಗಳು ದೊರಕುವಂತಾಗಲಿ. ಕೆಲಸ ಮಾಡಲು ಮನಸ್ಸಿದ್ದವರಿಗೆ ಕೈಗೆ ಉದ್ಯೋಗ ಒದಗಿಸುವ ಜೊತೆಗೆ ಪ್ರತಿಯೊಬ್ಬರು ಸ್ವಂತ ಕಾಲುಗಳ ಮೇಲೆ ನಿಲ್ಲಬಹುದಾದ ಯೋಜನೆಗಳನ್ನು ತರಲಿ. ಆಹಾರ- ನಾಗರಿಕ ಪೂರೈಕೆ ಸಮರ್ಪಕವಾಗಿರಲಿ.
►ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮೊಬೈಲ್‌ಗಳನ್ನು ಅವಲಂಬಿಸದಂತಾಗಲಿ. ತಂತ್ರಜ್ಞಾನದ ಹಂಗಿಲ್ಲದ ಸರಳ ಮತ್ತು ಸುಲಭ ವ್ಯವಸ್ಥೆಯ ಮೂಲಕ ಸರಕಾರದೊಂದಿಗೆ ಸಂವಹನ ನಡೆಸುವ ಮತ್ತು ಸೌಲಭ್ಯಗಳನ್ನು ಪಡೆಯುವ ಮಾದರಿಗಳನ್ನು ತನ್ನಿ.
►ದಿನಬಳಕೆ ಸಾಮಗ್ರಿಗಳು, ದಿನಸಿ, ಆಹಾರ ಧಾನ್ಯ, ತರಕಾರಿ, ಹಾಲು ಕುಟುಂಬಗಳ ಕನಿಷ್ಠ ಆದಾಯದ ಸೂಚ್ಯಂಕಕ್ಕೆ ಹೊಂದುವಂತೆ ಮಾರುಕಟ್ಟೆ ಬೆಲೆ ಏರಿಕೆ ನಿಯಂತ್ರಣದಲ್ಲಿ ಇಡಿ. ಅಡುಗೆ ಅನಿಲ, ವಿದ್ಯುತ್, ಸೀಮೆಎಣ್ಣೆ ದರ ಕಡಿಮೆ ಮಾಡಿ.
►ತಾಲೂಕಿನಲ್ಲಿ ಮಳೆ ಅಭಾವ ತೀವ್ರವಾಗಿದ್ದು, ನೀರಿಲ್ಲದೆ ಕೃಷಿ ಫಸಲು ಒಣಗುತ್ತಿದೆ. ಕೃಷಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಹಳ್ಳಿಗಳ ಒಳಗೆ ಇರುವ ಸಣ್ಣಪುಟ್ಟ ಕೆರೆಗಳನ್ನು ತುರ್ತು ಅಭಿವೃದ್ಧಿ ಮಾಡಬೇಕು.
►ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವುದರ ಜೊತೆಗೆ ಗ್ರಾಮಕ್ಕೊಂದು ಗೋಶಾಲೆ ತೆರೆದು ರೈತರಿಗೆ ನೆರವಾಗಬೇಕು. ಕಿಂಡಿಅಣೆಕಟ್ಟು ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆಯಲ್ಲಿ ಬಳಕೆಗೆ ಸಾಕಾಗುವಂತೆ ಕ್ರಮ ವಹಿಸಿ. ನೀರು ಸೋರಿಕೆಯಾಗಿ ಪೋಲಾಗದಂತೆ ಕಿಂಡಿ ಅಣೆಕಟ್ಟುಗಳ ಎಡಬಲ ಕಾಲುವೆಗಳ ಬಳಿ ಸೂಕ್ತ ತಡೆಗೋಡೆ ನಿರ್ಮಾಣವಾಗಲಿ. ಹಳೆಯ ಮತ್ತು ಕೆಟ್ಟು ಹೋದ ಕಿಂಡಿ ಅಣೆಕಟ್ಟುಗಳ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿ.
-ಪದ್ಮಾಕರ ಭಟ್, ಕೃಷಿಕ ಈದು.
►ಜನೋಪಕಾರಿ, ಜನಸ್ನೇಹಿ ಕೆಲಸ ಕಾರ್ಯಗಳು ಇನ್ನಷ್ಟು ಆಗಬೇಕು. ಗ್ರಾಮೀಣ ಸಾರಿಗೆ ವ್ಯವಸ್ಥೆ, ಕಾರ್ಕಳ ಹಳೆ ಬಸ್ ತಂಗುದಾಣಕ್ಕೆ ಸರಕಾರಿ ಬಸ್ಸುಗಳ ಪ್ರವೇಶ, ಬಸ್ ಡಿಪೋ, ಇಲ್ಲಿಂದಲೇ ಬೇರೆ ಊರಿಗೆ ಸಂಪರ್ಕ ಕಲ್ಪಿಸುವ ಸರಕಾರಿ ಬಸ್‌ಗಳ ವ್ಯವಸ್ಥೆ, ಉಡುಪಿ- ಕಾರ್ಕಳ- ಮಂಗಳೂರು ಸರಕಾರಿ ಎಕ್ಸ್‌ಪ್ರೆಸ್ ಬಸ್ಸುಗಳ ಓಡಾಟ, ಪೇಟೆಯ ಒಳಗೆ ಪಾರ್ಕಿಂಗ್ ವ್ಯವಸ್ಥೆ, ಪ್ರವಾಸಿ ತಾಣಗಳಿಗೆ ಹೋಗುವುದಕ್ಕೆ ಸರಕಾರಿ ಪ್ರಾಯೋಜಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
►ಬಿಎಸ್ಸೆನ್ನೆಲ್ ದೂರಸಂಪರ್ಕ ವ್ಯವಸ್ಥೆಯ ಆಧುನೀಕರಣ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಹತ್ತು ಹಲವು ಆಗಲೇಬೇಕಾದ ಅತೀ ಅಗತ್ಯ ಕೆಲಸಗಳ ಪಟ್ಟಿಯೇ ಇದೆ. ಇದರ ಜೊತೆಗೆ ಸ್ಥಳೀಯ ಯುವಕರಿಗೆ ಆದ್ಯತೆ ನೀಡುವ ಕೈಗಾರಿಕೆಗಳ ಆಯೋಜನೆ, ನನೆಗುದಿಗೆ ಬಿದ್ದಿರುವ ರೈಲ್ವೆ ಮಾರ್ಗ ಅಭಿವೃದ್ಧಿ, ಜೊತೆಗೆ ಸರಕಾರಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳನ್ನು ಈ ಪ್ರದೇಶಕ್ಕೆ ತರುವ ಕನಸುಕಂಡರೆ ತಪ್ಪಲ್ಲ.
►ಜನನಾಯಕರು ಈ ನಿಟ್ಟಿನಲ್ಲಿ ಯೋಚಿಸಿ, ಕನಸುಗಳು ಸಾಕಾರಗೊಂಡರೆ ಊರಿನ ಜನರಿಗೆ ನೆಮ್ಮದಿಯ ನಿಟ್ಟುಸಿರು ಜೊತೆಗೆ ಅಭಿವೃದ್ಧಿಯ ಪಥಕ್ಕೆ ವೇಗವೂ ಪ್ರಾಪ್ತವಾಗುತ್ತದೆ.
-ಡಾ.ಅರುಣಕುಮಾರ್ ಎಸ್.ಆರ್., ಮುಖ್ಯಸ್ಥರು, ಕನ್ನಡ ವಿಭಾಗ, ಶ್ರೀಭುವನೇಂದ್ರ ಕಾಲೇಜು, ಕಾರ್ಕಳ.