ಪ್ರತಿಫಲನಗಳು

Update: 2023-04-09 05:28 GMT

ಮಗ ಅಥವಾ ಮಗಳು ಹೇಳಿದ ಮಾತು ಕೇಳೋದೇ ಇಲ್ಲ. ಏತಿ ಅಂದರೆ ಪ್ರೇತಿ ಅಂತಾವೆ. ಒಂದು ಚೂರೂ ಸ್ಪಂದಿಸಲ್ಲ; ಅಂತೆಲ್ಲಾ ದೂರು ಹೇಳುವ ಹೆತ್ತವರನ್ನು ನೋಡುತ್ತಿರುತ್ತೇನೆ. ಅವರು ದೋಷಾರೋಪಣೆ ಮಾಡುವುದು ಮುಗಿದಾದ ಮೇಲೆ ನನ್ನ ತಣ್ಣನೆಯ ಕೆಲವು ಪ್ರಶ್ನೆಗಳು ಅವರ ತಲೆಯನ್ನು ಭಯಂಕರ ಬಿಸಿ ಮಾಡುತ್ತದೆ.

ಆ ಮಗ ಅಥವಾ ಮಗಳು ಯಾವ ಗ್ರಹದವರು? ಯಾರು ಹೆತ್ತವರು? ಯಾರು ಬೆಳೆಸಿದವರು? ಯಾರ ಮನೆಯಲ್ಲಿ ಅವರು ಬದುಕುತ್ತಿರುವುದು? ಇವರು ಇಷ್ಟಪಡದಿರುವ, ಇವರಿಗೆ ಕಷ್ಟವಾಗುತ್ತಿರುವ ಆ ಮಕ್ಕಳ ವರ್ತನೆಗಳ ಮೂಲ ಯಾವುದು? ಯಾರಿಂದ ಅವರು ಕಲಿತಿದ್ದು? ಯಾರು ಅವರಿಗೆ ಮಾದರಿ?

ಅನಪೇಕ್ಷಿತ ಮತ್ತು ಅನಿರೀಕ್ಷಿತ ವರ್ತನೆಗಳನ್ನು ಮಕ್ಕಳು ತೋರುತ್ತಿದ್ದಾಗ ತಂದೆ ಅಥವಾ ತಾಯಿ ಅಥವಾ ಕುಟುಂಬದ ಇತರ ಹಿರಿಯ ಸದಸ್ಯರು ಮಾಡಬೇಕಾಗಿರುವುದೇನೆಂದರೆ, ಈ ಮಗು ಯಾರನ್ನು ಪ್ರತಿಫಲಿಸುತ್ತಿದೆ? ಎಂದು ನೋಡುವುದು. ಗಮನವಿಟ್ಟು ನೋಡುವುದು.

ಮಗುವು ಯಾರನ್ನೋ ಪ್ರತಿಫಲಿಸುತ್ತಿರುತ್ತದೆ. ಯಾರಂತೆಯೇ ವರ್ತಿಸುತ್ತಿರುತ್ತದೆ. ನಮ್ಮಂತೆಯೂ ಇರಬಹುದು ಮತ್ತು ನಮ್ಮನ್ನೂ ಸೇರಿದಂತೆ ಹಲವರ ಸಮ್ಮಿಶ್ರಣವೂ ಇರುತ್ತದೆ. ಅಂತಾದಾಗ ಅವರನ್ನು ಸರಿ ಮಾಡುವುದೆಲ್ಲಿ?

ನಮ್ಮದೇ ರೀತಿಯಲ್ಲಿ ಮಕ್ಕಳು ಮಾತ್ರವಲ್ಲ, ಬೇರೆ ಯಾರೇ ವರ್ತಿಸುತ್ತಿದ್ದರೂ ಅವರು ನಮ್ಮಂತೆ ವರ್ತಿಸುತ್ತಿದ್ದಾರೆ ಎಂದು ಅನಿಸುವುದೇ ಇಲ್ಲ. ಏಕೆಂದರೆ ಅದು ನಮ್ಮ ವರ್ತನೆಯ ಭಾಗವಾಗಿದ್ದಾಗ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದು, ಬೇರೆಯವರದಾದಾಗ ಆಕ್ಷೇಪಿಸುವುದು ಸ್ವಕೇಂದ್ರಿತ ಮನಸ್ಸಿನ ಸಾಮಾನ್ಯ ನಡವಳಿಕೆ.

ನಮ್ಮ ಜೀವನದಲ್ಲಿ ಅತ್ಯಂತ ಅಸಹನೀಯ ವ್ಯಕ್ತಿ ಎಂದರೆ ಬಹುಶಃ ಅದು ನಮಗೆ ನಾವೇ ಆಗಿದ್ದರೂ ನನ್ನ ನಾನು ಬಿಟ್ಟುಕೊಡದ ಅಹಮಿನ ಪರಿಣಾಮವಾಗಿ ಇತರರನ್ನು ದೂರುವುದರಲ್ಲಿ, ಆಕ್ಷೇಪಿಸುವುದರಲ್ಲಿ ಅತೀವ ಆಸಕ್ತಿ. ತನ್ನ ಬಗೆಗಿನ ಅಸಹನೆಯನ್ನು ತನ್ನ ಮೇಲೆ ತೋರಿಕೊಂಡು ಶಿಕ್ಷಿಸಿಕೊಳ್ಳಲು ಇಷ್ಟವಿಲ್ಲ! ಅಥವಾ ಆ ನೋವಿನಿಂದ ಪಲಾಯನ ಮಾಡಬೇಕಿರುತ್ತದೆ. ಹಾಗಾಗಿಯೇ ಇತರರನ್ನು ತಿಳಿದುಕೊಳ್ಳಲೂ ಯತ್ನಿಸದೇ ಅವರ ಬಗ್ಗೆ ನಿರ್ಣಯಾತ್ಮಕವಾಗಿರುವುದು.

ಯಾರದೇ ಮನಸ್ಸನ್ನು ಅಥವಾ ವ್ಯಕ್ತಿತ್ವವನ್ನು ಅಥವಾ ವರ್ತನೆಗಳನ್ನು ತಿಳಿಯಬೇಕೆಂದರೆ, ವಿಶ್ಲೇಷಿಸಬೇಕೆಂದರೆ ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ ಎಂದರೆ ಆತ್ಮಾವಲೋಕನ. ತನ್ನದೇ ಮನಸ್ಸನ್ನು, ತನ್ನದೇ ಆಲೋಚನೆಯ ಬಗೆಯನ್ನು, ವ್ಯಕ್ತಿತ್ವವನ್ನು, ವರ್ತನೆಗಳನ್ನು, ವರ್ತನೆಗಳ ಕಾರಣಗಳನ್ನು ಯಾರು ತಿಳಿದುಕೊಳ್ಳುವುದರಲ್ಲಿ ವಿಫಲರಾಗುತ್ತಾರೆಯೋ ಅವರು ಇತರರನ್ನು ವಿಶ್ಲೇಷಿಸುವುದರಲ್ಲಿ ಖಂಡಿತವಾಗಿಯೂ ಸಫಲವಾಗುವುದಿಲ್ಲ.

ವಯಸ್ಕರು ತಮ್ಮ ವಯಸ್ಸಾದ ತಂದೆ ತಾಯಿ ಅಥವಾ ಇತರ ಮನೆಯ ಹಿರಿಯ ಸದಸ್ಯರ ಹಟಮಾರಿತನಗಳನ್ನು, ಜಿದ್ದುಗೇಡಿತನಗಳನ್ನು ನೋಡುವುದಾಗ, ಅಂತಹ ನಡವಳಿಕೆಗಳ ಜೊತೆಗೆ ಹೆಣಗಾಡುವಾಗ ತಮ್ಮನ್ನು ತಾವು ಒಮ್ಮೆ ಸಾಕ್ಷೀಕರಿಸಿಕೊಳ್ಳಬೇಕು. ತಾವು ತಮ್ಮ ಮಕ್ಕಳ ಜೊತೆಗೆ ಅಥವಾ ತಮಗಿಂತ ಕಿರಿಯ ಸದಸ್ಯರ ಜೊತೆ ಇದೇ ರೀತಿಯಲ್ಲಿ ವರ್ತಿಸುತ್ತಿದ್ದೇವೆಯಾ? ವಿಷಯಗಳು, ವಸ್ತುಗಳು, ಪ್ರಸಂಗಗಳು ಬೇರೆಯೇ ಇರಬಹುದು! ಆದರೆ ವರ್ತನೆಗಳ ಮತ್ತು ಧೋರಣೆಗಳ ಮಾದರಿಗಳಲ್ಲಿ ಸಾಮ್ಯತೆ ಇವೆಯಾ? ಇದ್ದೀತು! ಎಚ್ಚೆತ್ತುಕೊಳ್ಳಬೇಕು.

ಹಿಂದೆ ಇದ್ದ ರಾಜಕೀಯ ಪಕ್ಷವು ಭ್ರಷ್ಟಾಚಾರದ್ದೆಂದು ಜರಿಯುತ್ತಾ, ಅದನ್ನು ಸ್ಥಾನ ಪಲ್ಲಟ ಮಾಡಿ ಬಂದ ಇನ್ನೊಂದು ರಾಜಕೀಯ ಪಕ್ಷವು ಅದಕ್ಕಿಂತ ಹೆಚ್ಚಿನ ಭ್ರಷ್ಟಾಚಾರ ಮಾಡುತ್ತಾ ‘‘ಇಂತವೆಲ್ಲಾ ವ್ಯವಸ್ಥೆಯಲ್ಲಿ ಇದ್ದದ್ದೇ. ಇದರಿಂದ ತಪ್ಪಿಸಿಕೊಳ್ಳಲಾಗದು’’ ಎನ್ನುವ ಸಮರ್ಥನೆ ಮಾಡಿಕೊಳ್ಳುವುದು ಸಮಾಜೋರಾಜಕೀಯ ವ್ಯವಸ್ಥೆಯಲ್ಲಿ ಕಾಣದಿರುವುದೇನಲ್ಲ. ಅದ್ಯಾವುದೋ ಸಮುದಾಯದವರು, ಧರ್ಮೀಯರು ಅಂತಹ ಕ್ರೌರ್ಯಗಳನ್ನು ಮಾಡಿದ್ದಾರೆಂದು ಹಳಿಯುತ್ತಾ ಈಗ ತಾವೂ ಅಂತಹ ಕ್ರೌರ್ಯ ಎಸಗುವುದರಲ್ಲಿ ತಪ್ಪಿಲ್ಲವೆಂದೋ ಅಥವಾ ಅದಕ್ಕೆ ಈ ಕ್ರೌರ್ಯವೇ ಮದ್ದು ಎಂದೋ, ತಮ್ಮ ಹಿಂಸಾರತಿಯನ್ನು ತೃಪ್ತಿಪಡಿಸಿಕೊಳ್ಳುವುದರಲ್ಲಿ ತಂಡಗಳಾಗುವುದು ಸಮರ್ಥನೆಯೆ?.

ತಪ್ಪುಗಳನ್ನು ಸಮರ್ಥಿಸಿಕೊಂಡಷ್ಟೂ ಅವು ಬಲಗೊಳ್ಳುವವು. ಅವುಗಳನ್ನು ಎಂದಿಗೂ ಸರಿಪಡಿಸಲಾಗದು.

ರೋಗವನ್ನು ರೋಗವೆಂದು ಒಪ್ಪಿಕೊಂಡರಷ್ಟೇ ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುವುದು. ಇಲ್ಲವಾದರೆ ರೋಗವನ್ನೇ ಒಂದು ಘನತೆಯ ಗುರುತನ್ನಾಗಿಸಿಕೊಳ್ಳಬೇಕಾಗುವುದು. ಇನ್ನು ಗುಣವಾಗುವುದು ಮರೀಚಿಕೆ.

ಈ ವಿಷಯ ವ್ಯಕ್ತಿಗತವಾಗಿಯಾಗಲಿ, ಕೌಟುಂಬಿಕವಾಗಿಯಾಗಲಿ, ರಾಜಕೀಯವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ, ಸಾಂಸ್ಕೃತಿಕವಾಗಿ ಯಾಗಲಿ, ಧಾರ್ಮಿಕವಾಗಿಯಾಗಲಿ; ಗಮನಿಸಲೇಬೇಕಷ್ಟೇ! ಆರೋಗ್ಯಕರ ಅಸ್ತಿತ್ವವೇ ಯಾವುದಕ್ಕಾದರೂ ಬೇಕಾಗಿರುವುದು. ಅವೇ ಉಳಿಯುವುದು. ಅವೇ ಬೆಳೆಯಬೇಕಾಗಿರುವುದು. ವೈರಸ್‌ಗಳಲ್ಲ! ಕ್ಯಾನ್ಸರ್ ಕಣಗಳಲ್ಲ!

Similar News

ಮಧುರ ವಿಷ
ಮನೋಭವನ
ಕಿವಿಗೊಡೋಣ
ಜಡತೆಯ ರೋಗ