ರಾಮನವಮಿಯಂದು ನಡೆದ ಹಿಂಸಾಚಾರ ಪ್ರಕರಣ: ಬಜರಂಗದಳ ಪದಾಧಿಕಾರಿ ಸಹಿತ 8 ಮಂದಿ ಆರೋಪಿಗಳು ಪೊಲೀಸರಿಗೆ ಶರಣು
ಪಾಟ್ನಾ: ಮಾರ್ಚ್ 30ರಂದು ನಳಂದ ಜಿಲ್ಲೆಯ ಬಿಹಾರ್‌ಶರೀಫ್ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ತೆರಳುವಾಗ ನಡೆದ ಗಲಭೆ ಪ್ರಕರಣದಲ್ಲಿ (Ram Navami violence case) ಶನಿವಾರ ಎಂಟು ಮಂದಿ ಪೊಲೀಸರಿಗೆ ಶರಣಾಗಿದ್ದು, ಈ ಪೈಕಿ ಓರ್ವ ಬಜರಂಗದಳ (Bajrang Dal) ಪದಾಧಿಕಾರಿ ಸೇರಿದ್ದಾನೆ ಎಂದು newindianexpress.com ವರದಿ ಮಾಡಿದೆ.
ಶನಿವಾರ ಬೆಳಗ್ಗೆ ಪೊಲೀಸರು ನಳಂದ ಜಿಲ್ಲೆಯ ಬಜರಂಗದಳದ ಜಿಲ್ಲಾ ಸಂಚಾಲಕನಾದ ಆರೋಪಿ ಕುಂದನ್ ಕುಮಾರ್‌ಗೆ ಸೇರಿದ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗೆ ಚಾಲನೆ ನೀಡುವುದಕ್ಕೂ ಮುನ್ನ ಆತ ಅವರಿಗೆ ಶರಣಾಗಿದ್ದಾನೆ.
ಇದರ ಬೆನ್ನಿಗೇ ಹಿರಿಯ ಪೊಲೀಸ್ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅದರೆ, ನಾನು ರಾಮನವಮಿ ಮೆರವಣಿಗೆಯ ಸಂಘಟಕನಾಗಿದ್ದುದರಿಂದ ಪೊಲೀಸರು ನನ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಕುಂದನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾನೆ.
"ನಾನು ಅದಾಗಲೇ ಮೆರವಣಿಗೆಗೆ ಅನುಮತಿ ಕೋರಿ ಸ್ಥಳೀಯ ಜಿಲ್ಲಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದೆ" ಎಂದು ಹೇಳಿರುವ ಕುಂದನ್, ಮೆರವಣಿಗೆಯ ಸಂದರ್ಭದಲ್ಲಿನ ಗೊಂದಲಗಳಿಗೆ ಪೊಲೀಸರು ಕಾರಣ ಎಂದು ಆರೋಪಿಸಿದ್ದಾನೆ.
"ಅವರು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದರೆ ಘಟನೆಯನ್ನು ತಪ್ಪಿಸಬಹುದಿತ್ತು. ಅದು ಅಕ್ಷರಶಃ ಪೊಲೀಸರ ಕರ್ತವ್ಯಲೋಪವಾಗಿದೆ. ನ್ಯಾಯ ಒದಗಿಸುವ ನ್ಯಾಯಾಂಗದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಆತ ಹೇಳಿದ್ದಾನೆ.
ಪಪ್ಪು ಮಿಯಾನ್ ಎಂದು ಗುರುತಿಸಲಾಗಿರುವ ಮತ್ತೊಬ್ಬ ಆರೋಪಿಯು ಅರಾರಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್ ಠಾಣೆಯ ಪೊಲೀಸರಿಗೆ ಶರಣಾಗಿದ್ದಾನೆ. ಆತನನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಪಕ್ಷಪಾತಿ ಅಜೆಂಡಾ: ಪಠ್ಯಪುಸ್ತಕ ಬದಲಾವಣೆ ವಿರುದ್ಧ 250 ಇತಿಹಾಸಕಾರರಿಂದ ಟೀಕೆ