×
Ad

ದೇಶಕ್ಕೆ ಸಂವಿಧಾನ ಮುಖ್ಯವೇ ಹೊರತು ಮನುಸ್ಮೃತಿ ಅಲ್ಲ: ಡಾ.ಮಹಾಬಲೇಶ್ವರ ರಾವ್

ಡಾ.ಭಾಸ್ಕರ ರಾವ್‌ರ ‘ಸಾರ್ವಕಾಲಿಕ’ ಪುಸ್ತಕ ಬಿಡುಗಡೆ ಸಮಾರಂಭ

Update: 2023-04-09 20:43 IST

ಉಡುಪಿ: ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟು ಹಾಕಿದರು ಮತ್ತು ಗಾಂಧಿ ಮನುಸ್ಮೃತಿಯನ್ನು ಪೂರ್ಣವಾಗಿ ಒಪ್ಪಿಕೊಳ್ಳಲಿಲ್ಲ ಯಾಕೆ ಎಂಬ ವಿಚಾರದ ಬಗ್ಗೆ ಇಂದು ಗಂಭೀರವಾಗಿ ಚರ್ಚೆ ಮಾಡಬೇಕಾದ ಅಗತ್ಯ ಇದೆ. ಈ ದೇಶದ ಬದುಕುವ ನಮಗೆ ಸಂವಿಧಾನ ಹಾಗೂ ಕಾಲ ಕಾಲಕ್ಕೆ ಬದಲಾಗುವ ಕಾನೂನುಗಳೇ ಮುಖ್ಯವೇ ಹೊರತು ಮನುಸ್ಮೃತಿ ಏನಿದೆ ಏನಿಲ್ಲ ಎಂಬುದು ಅಲ್ಲ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಉಡುಪಿ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಹಿರಿಯ ಅಂಕಣಕಾರ ಡಾ.ಬಿ.ಭಾಸ್ಕರ ರಾವ್ ಇವರ ‘ಸಾರ್ವಕಾಲಿಕ’ ಸಂಸ್ಕೃತಿ ಬರಹಗಳ ಸಂಗ್ರಹ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿ ಅವಲೋಕನ ಮಾಡಿ ಮಾತನಾಡುತಿದ್ದರು.

ಇಂದು ಎಲ್ಲ ಸರಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ಕನ್ನಡ ಭಾಷೆಯ ಮೇಲೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಆಂಗ್ಲ ಮಾಧ್ಯಮದ ಓದಿದ ಮಾತ್ರಕ್ಕೆ ಯಾವುದೇ ಉದ್ಯೋಗ ಸಿಗುತ್ತದೆ ಎಂಬುದು ಭರವಸೆಗಳು ಇಂದು ಇಲ್ಲವಾಗಿದೆ. ಅದರ ಒಳಗಡೆಯೂ  ಮತ್ತೆ ಜಾತಿಯ ತಾರತಮ್ಯವೋ ಶ್ರೇಣಿಕರಣವೊ ಬರುತ್ತದೆ ಎಂದು ಅವರು ಹೇಳಿದರು.

ಓದುಗರ ಪ್ರಜ್ಞೆಯನ್ನು ಚಿಂತನೆಗೆ ಹಚ್ಚುವ ಲೇಖನಗಳು ಈ ಪುಸ್ತಕದಲ್ಲಿವೆ. ಓದುಗರನ್ನು ಇನ್ನಷ್ಟು ಶಿಕ್ಷಿತರನ್ನಾಗಿಸುವ, ವಿಚಾರವಂತರನ್ನಾಗಿಸುವ ಮತ್ತು ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಕೇಳುವಂತಹ ವಿಚಾರಗಳು ಇದರಲ್ಲಿದೆ. ಆದರೆ ಇಂದು ಪ್ರಶ್ನೆ ಕೇಳುವವರನ್ನು ನಗರ ನಕ್ಸಲ್, ಬುದ್ದಿಜೀವಿಗಳು ಎಂದು ಕರೆಯವ ಸ್ಥಿತಿ ಬಂದಿದೆ. ನೀವು ಬಾಯಿ ಮುಚ್ಚು ಕುಳಿತರೆ ಸಭ್ಯ ನಾಗರಿಕರು, ಇಲ್ಲದಿದ್ದರೆ ನಗರ ನಕ್ಸಲರು ಎಂಬ ಬಿರುದು ಪಡೆಯಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಪುಸ್ತಕವನ್ನು ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಬಿಡುಗಡೆಗೊಳಿಸಿದರು. ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಜಿ.ಪಿ. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.  

Similar News